ADVERTISEMENT

ಬೆಂಗಳೂರು: 7 ವರ್ಷ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆ ಸಾವು; ₹ 9.5 ಕೋಟಿ ಬಿಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಮೇ 2022, 8:40 IST
Last Updated 28 ಮೇ 2022, 8:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 35 ವರ್ಷದ ಮಹಿಳೆಯೊಬ್ಬರು ಸುಮಾರು 7 ವರ್ಷಗಳ ಕಾಲಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗದೆ ಮೃತಪಟ್ಟ ಘಟನೆ ನಗರದಲ್ಲಿ ವರದಿಯಾಗಿದೆ.

ಅಕ್ಸೆಂಚರ್‌ನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದ, ದೆಹಲಿ ಮೂಲದ ಪೂನಮ್‌ ರಾಣಾ ಅಕ್ಟೋಬರ್‌ 2015ರಲ್ಲಿ ಹೊಟ್ಟೆ ನೋವಿನ ಕಾರಣಕ್ಕೆ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಮುಂಬೈ ಆಸ್ಪತ್ರೆಯಲ್ಲಿ ಸುಮಾರು 42 ವರ್ಷಗಳ ಕಾಲ ಕೋಮಾ ಸ್ಥಿತಿಯಲ್ಲಿ ದಾಖಲಾಗಿದ್ದ ಅರುಣಾ ಶಾನುಬಾಗ್‌ ಬಳಿಕ ದೀರ್ಘವಧಿಯ ಕಾಲ ಆಸ್ಪತ್ರೆಯಲ್ಲಿ ದಾಖಲಾದ 2ನೇ ಪ್ರಕರಣ ಪೂನಮ್‌ ಅವರದ್ದು ಎನ್ನಲಾಗಿದೆ.

ಆರಂಭದಲ್ಲಿ ಇದೊಂದು ಸಾಮಾನ್ಯ ಪ್ರಕರಣ ಎಂದೇ ಗ್ರಹಿಸಲಾಗಿತ್ತು. ಸಣ್ಣ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು. ಬಳಿಕ ಲೆಕ್ಕವಿಡಲು ಸಾಧ್ಯವಾಗದಷ್ಟು ತಿರುವುಗಳು, ಸಂಕಷ್ಟಗಳು ಎದುರಾದವು. ಮಂಗಳವಾರ ಮಧ್ಯಾಹ್ನ ಪೂನಮ್‌ ಮೃತಪಟ್ಟಾಗ ಕೋಮಾ ಹಂತದಲ್ಲಿದ್ದರು ಎಂದು ಪೂನಮ್‌ ಅವರ ಪತಿ ರಾಜೇಶ್‌ ನಾಯರ್‌ ತಿಳಿಸಿದ್ದಾರೆ.

ADVERTISEMENT

ಪತ್ನಿಗೆ ನೀಡಲಾದ ದೀರ್ಘಾವಧಿ ಚಿಕಿತ್ಸೆ ಬಗ್ಗೆ ಮಾತನಾಡಿದ ರಾಜೇಶ್‌, ಇದುವರಗೆ ಒಟ್ಟು ₹ 9.5 ಕೋಟಿ ಬಿಲ್‌ ಆಗಿದೆ. ₹ 2 ಕೋಟಿ ಬಿಲ್‌ ಅನ್ನು ಕಟ್ಟಲಾಗಿದೆ ಎಂದರು.

ಮಣಿಪಾಲ್‌ ಆಸ್ಪತ್ರೆ ಹೇಳಿಕೆ

'2015, ಆಕ್ಟೋಬರ್‌ 2ರಂದು ಪೂನಮ್‌ ಅವರನ್ನು ಎಂಐಸಿಯು(ಮೆಡಿಕಲ್‌ ಇಂಟೆನ್ಸಿವ್‌ ಕೇರ್‌ ಯುನಿಟ್‌)ಗೆ ದಾಖಲಿಸಲಾಗಿತ್ತು. ಇದುವರೆಗೆ ಎಲ್ಲ ವಿಧದ ಆರೈಕೆಯನ್ನು ಮಾಡಲಾಗಿದೆ. ಎಲ್ಲ ಪ್ರಯತ್ನಗಳ ನಡುವೆ 2022, ಮೇ 24ರಂದು ಮಧ್ಯರಾತ್ರಿ 12 ಗಂಟೆಗೆ ಮೃತರಾದರು' ಎಂದು ಮಣಿಪಾಲ್‌ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳ ಮೂಲದ ರಾಜೇಶ್‌ ನಾಯರ್‌ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ರಾಜೇಶ್‌ ಮತ್ತು ಪೂನಮ್‌ ದಂಪತಿಗೆ ಮಕ್ಕಳಿರಲಿಲ್ಲ ಎಂಬುದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.