ADVERTISEMENT

ಪಿಎಫ್‌ಐ ಮೇಲೆ ದಾಳಿ: ಗಮನ ಬೇರೆಡೆ ಸೆಳೆಯುವ ತಂತ್ರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 7:12 IST
Last Updated 4 ಡಿಸೆಂಬರ್ 2020, 7:12 IST

ಬೆಂಗಳೂರು: ‘ಪಾಪ್ಯುಲರ್‌ ಫ್ರಂಟ್ ಆಫ್‌ ಇಂಡಿಯಾದ (ಪಿಎಫ್‌ಐ) ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿರುವುದು ಜನರ ಗಮನ ಬೇರೆಡೆ ಸೆಳೆಯುವ ತಂತ್ರ’ ಎಂದು ಪಿಎಫ್‌ಐನ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್‌ ಶಾಕಿಫ್‌ ದೂರಿದರು.

‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟದ ಬಳಿಕ ಈಗ ರೈತರ ಹೋರಾಟವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬುಡವನ್ನು ಅಲ್ಲಾಡಿಸುತ್ತಿದೆ. ಈ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯುವ ದುರುದ್ದೇಶದಿಂದ ಇ.ಡಿಯನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.

‘ರಾಜಕೀಯ ಎದುರಾಳಿಗಳನ್ನು ಮತ್ತು ಭಿನ್ನಮತ ದಮನ ಮಾಡಲು ಬಿಜೆಪಿ ಸರ್ಕಾರ ಯಾವಾಗಲೂ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಈಗ ಈ ಸಂಸ್ಥೆಗಳ ವಿಶ್ವಾಸಾರ್ಹತೆಯ ಬಗ್ಗೆಯೇ ಪ್ರಶ್ನೆಗಳು ಉದ್ಭವಿಸುತ್ತಿವೆ’ ಎಂದು ಹೇಳಿದರು.

ADVERTISEMENT

‘ಸಿಎಎ ಸಂವಿಧಾನ ವಿರೋಧಿ ಕಾಯ್ದೆ. ಇದರ ವಿರುದ್ಧ ಪಿಎಫ್‌ಐ ನಿರಂತರ ಹೋರಾಟ ನಡೆಸುತ್ತಿದೆ. ನಮ್ಮ ಹೋರಾಟ ಹತ್ತಿಕ್ಕಲು ಕೇಂದ್ರ ಸರ್ಕಾರ ಮುಂದಾಗಿದೆ. ನಾವು ಇಂತಹ ದಾಳಿಗೆ ಹೆದರುವುದಿಲ್ಲ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.