ADVERTISEMENT

‘ಅನುಕೂಲವಾದರೆ ಮಾತ್ರ ಪಾಡ್‌ ಟ್ಯಾಕ್ಸಿ’

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 20:04 IST
Last Updated 17 ಜುಲೈ 2018, 20:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಾಡ್‌ ಟ್ಯಾಕ್ಸಿ ಸೇವೆಯಿಂದ ನಗರಕ್ಕೆ ಅನುಕೂಲವಾಗುವುದಾದರೆ ಮಾತ್ರ ಈ ಯೋಜನೆಯನ್ನು ಆರಂಭಿಸುತ್ತೇವೆ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದ್ದಾರೆ.

‘ಕೆಲವು ನಗರಯೋಜನಾ ತಜ್ಞರಿಂದ ವಿರೋಧ ವ್ಯಕ್ತವಾಗಿದೆ ಎಂಬ ಕಾರಣಕ್ಕೆ ಈ ಯೋಜನೆಯನ್ನೇ ರದ್ದುಪಡಿಸುವುದಾಗಿ ನಾನು ಹೇಳಿಲ್ಲ. ನಮ್ಮ ಪಕ್ಷದವರು ಆರಂಭಿಸಿದ್ದಾರೆ ಎಂಬ ಮಾತ್ರಕ್ಕೆ ಇದಕ್ಕೆ ಅನುಮತಿ ನೀಡಲಾಗದು. ಈ ಬಗ್ಗೆ ಒಮ್ಮತದ ತೀರ್ಮಾನ
ವಾಗಲಿ’ ಎಂದು ಮೇಯರ್‌ ಹೇಳಿದರು.

‘ಈ ಯೋಜನೆಗೆ ಪಾಲಿಕೆ ಹಣ ಹೂಡಿಕೆ ಮಾಡಬೇಕಾಗಿಲ್ಲ. ಯೋಜನೆ ಕುರಿತ ವಿವರಗಳನ್ನು ಒದಗಿಸುವಂತೆ ವಿರೋಧ ಪಕ್ಷದವರು ಒತ್ತಾಯಿಸಿದ್ದಾರೆ. ಪಾಲಿಕೆ ಸಭೆಯಲ್ಲಿ ಈ ಬಗ್ಗೆ ಕೈಗೊಳ್ಳುವ ನಿರ್ಣಯಕ್ಕೆ ನಾನು ಬದ್ಧ’ ಎಂದರು.

ADVERTISEMENT

‘ರಾಜಕೀಯ ಕಾರಣಕ್ಕೆ ಕೆಲವು ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಯೋಜನೆಯಿಂದ ಆಗುವ ಹಾನಿಯಾದರೂ ಏನು ಎಂಬುದನ್ನು ಅವರು ಸಾಬೀತುಪಡಿಸಲಿ’ ಎಂದು ಸವಾಲು ಎಸೆದರು.

ಹೆಲಿಪ್ಯಾಡ್‌ಗೆ ಬಿಬಿಎಂಪಿ ಜಾಗ

ಕಲ್ಲು ಕ್ವಾರಿಗಳಿಗೆ ಕಸ ತುಂಬಿ ಭೂಭರ್ತಿ ಮಾಡಿರುವ ಜಾಗಗಳ ಪೈಕಿ ಕೆಲವನ್ನು ಹೆಲಿಪ್ಯಾಡ್‌ ನಿರ್ಮಾಣಕ್ಕೆ ಬಾಡಿಗೆಗೆ ನೀಡಲು ಬಿಬಿಎಂಪಿ ತೀರ್ಮಾನಿಸಿದೆ.

ದಾಸರಹಳ್ಳಿ ವಲಯದ ಮಲ್ಲಸಂದ್ರ, ಬೊಮ್ಮನಹಳ್ಳಿಯ ಬಿಂಗೀಪುರ, ದಕ್ಷಿಣ ವಲಯದ ಅಂಜನಾಪುರ, ಯಲಹಂಕ ವಲಯದ ಬೆಲ್ಲಹಳ್ಳಿ ಹಾಗೂ ಬಾಗಲೂರುಗಳಲ್ಲಿ ಇದಕ್ಕೆ ಜಾಗ ಗುರುತಿಸಲಾಗಿದೆ. ಮಹದೇವಪುರ ವಲಯದಲ್ಲಿ ಜಾಗಕ್ಕಾಗಿ ಹುಡುಕಾಟ ನಡೆದಿದೆ.

ಹೆಲಿಪ್ಯಾಡ್‌ ನಿರ್ಮಿಸುವವರಿಗೆ ನಾವು ನಗರದ ಹೊರವಲಯದಲ್ಲಿರುವ ಜಾಗವನ್ನು ಬಾಡಿಗೆಗೆ ನೀಡುತ್ತೇವೆ. ತ್ಯಾಜ್ಯವನ್ನು ಭರ್ತಿ ಮಾಡಿರುವ ಈ ಜಾಗಗಳು ವ್ಯರ್ಥವಾಗುವ ಬದಲು ಈ ನಿಟ್ಟಿನಲ್ಲಾದರೂ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಮೇಯರ್‌ ಸಂಪತ್‌ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

24 ಗಂಟೆ ಗಡುವು

ಪೌರಕಾರ್ಮಿಕರಿಗೆ ಪಾಲಿಕೆ ಬಾಕಿ ಉಳಿಸಿಕೊಂಡಿರುವ ವೇತನವನ್ನು 24 ಗಂಟೆಗಳ ಒಳಗೆ ಪಾವತಿಸಬೇಕು ಎಂದು ಮೇಯರ್‌ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ.

ಪೌರ ಕಾರ್ಮಿಕರ ವೇತನ ಪಾವತಿ ಬಗ್ಗೆ ಬಿಬಿಎಂಪಿಯ ಪಶ್ಚಿಮ ವಲಯ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಸಿದರು.

ಮೂರು ವಲಯಗಳಲ್ಲಿ ಒಂದು ವರ್ಷದಿಂದ ಕೆಲವರಿಗೆ ಒಂದು ವರ್ಷದಿಂದ ವೇತನ ಪಾವತಿ ಆಗಿಲ್ಲ. ಇಂತಹ ಧೋರಣೆ ಸಹಿಸಲಾಗದು. ತಕ್ಷಣವೇ ಬಾಕಿ ‍ಪಾವತಿಸುವಂತೆ ಸೂಚನೆ ನೀಡಿದ್ದೇನೆ ಎಂದು ಮೇಯರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.