ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಬಾವುಟ ಹಿಡಿದು ನೃತ್ಯ ಮಾಡುತ್ತಿರುವಂತೆ ಕೃತಕ ಬುದ್ಧಿಮತ್ತೆ (ಎ.ಐ) ಬಳಸಿ ನಕಲಿ ವಿಡಿಯೊ ಸೃಷ್ಟಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಆರೋಪಿ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮುಖ್ಯಮಂತ್ರಿಯವರ ಉಪ ಕಾರ್ಯದರ್ಶಿ ಅರುಣ್ ಅವರು ನೀಡಿದ ದೂರಿನ ಮೇರೆಗೆ ವಿಧಾನಸೌಧ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
‘ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆರೋಪಿಯ ಪತ್ತೆಗೆ ತಜ್ಞರ ನೆರವು ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
ಇನ್‌ಸ್ಟಾಗ್ರಾಂನಲ್ಲಿ ‘ನಮ್ಮ ಮೋದಿ’ ಹೆಸರಿನ ಖಾತೆಯಲ್ಲಿ ಸಿದ್ದರಾಮಯ್ಯ ಅವರು ಪಾಕಿಸ್ತಾನದ ಬಾವುಟ ಹಿಡಿದು ನೃತ್ಯ ಮಾಡುತ್ತಿರುವಂತೆ ವಿಡಿಯೊ ಸೃಷ್ಟಿಸಿ ಏಪ್ರಿಲ್ 27ರಂದು ಪೋಸ್ಟ್ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಕೈಯಲ್ಲಿ ಶತ್ರು ರಾಷ್ಟ್ರದ ಧ್ವಜವನ್ನು ನೀಡಿ ನೃತ್ಯ ಮಾಡುವಂತೆ ನಕಲಿ ವಿಡಿಯೊ ಸೃಷ್ಟಿಸಿರುವ ಆರೋಪಿಯನ್ನು ಪತ್ತೆ ಮಾಡಿ ಆ ವ್ಯಕ್ತಿಯ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.