ADVERTISEMENT

ಸಮೀಕ್ಷೆ ಮುಂದೂಡಿ: ಒಕ್ಕಲಿಗರ ನಿರ್ಣಯಕ್ಕೆ ಸಚಿವರ ಸಹಮತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 16:22 IST
Last Updated 20 ಸೆಪ್ಟೆಂಬರ್ 2025, 16:22 IST
   

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಮುಂದೂಡಬೇಕು ಎಂದು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಮತ್ತು ಪಕ್ಷಾತೀತವಾಗಿ ಪಾಲ್ಗೊಂಡ ರಾಜಕೀಯ ನಾಯಕರ ಸಭೆ ನಿರ್ಣಯ ಕೈಗೊಂಡಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಸಮುದಾಯದ ರಾಜಕೀಯ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. 

‘ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಕೇಳಿ ಸಂತೋಷವಾಯಿತು’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು ಎಂದು ಗೊತ್ತಾಗಿದೆ. ಸಚಿವರಾದ ಎನ್. ಚಲುವರಾಯಸ್ವಾಮಿ, ಎಂ.ಸಿ. ಸುಧಾಕರ್ ಸಹ ಸಭೆಯಲ್ಲಿದ್ದರು.

ADVERTISEMENT

 ‘ಸಮೀಕ್ಷೆ ಮುಂದೂಡುವ ಕುರಿತು ಪ್ರಯತ್ನ ನಡೆಸಲಾಗುವುದು. ಸ್ವಾಮೀಜಿಗಳು, ನಾಯಕರು ಬೆಂಬಲ ನೀಡಬೇಕು. ಎಲ್ಲಾ ಸಮುದಾಯಗಳಿಗೆ ನ್ಯಾಯ ಸಿಗಬೇಕು. ಎಲ್ಲರೂ ಒಟ್ಟಿಗೆ ಸಾಗುವ ಮೂಲಕ ಸಮಾಜವನ್ನು ಉಳಿಸೋಣ’ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾಗಿ ಮೂಲಗಳು ತಿಳಿಸಿವೆ. 

‘ಸ್ವಾಮೀಜಿಯವರಿಗೆ ನಾನೇ ಒತ್ತಾಯ ಮಾಡಿ ಸಭೆಯ ‌ದಿನಾಂಕ ನಿಗದಿಮಾಡಿಸಿದೆ. ಸಮಾಜ ಉಳಿಸಿಕೊಳ್ಳಬೇಕು, ಸಮಾಜದ ಋಣ ತೀರಿಸಬೇಕು ಅಂತ ಎಲ್ಲರೂ ಬಂದಿದ್ದೀರಿ. ನಾವು ಯಾರೇ ಎಷ್ಟು ದೊಡ್ಡ ಸ್ಥಾನಕ್ಕೆ‌ ಹೋಗಿದ್ದರೂ ಅದು ನಮ್ಮ ಸಮಾಜದಿಂದಲೇ ಅನ್ನೋದು ಗಮನ ಇರಲಿ. ಸಮೀಕ್ಷೆಯಿಂದ ಸಮುದಾಯಕ್ಕೆ ಅನುಕೂಲವೂ ಆಗಲಿದೆ. ನಮ್ಮ ಸಮುದಾಯದ ರಕ್ಷಣೆಗೆ ನಾವು ಬೇರೆ ತಂತ್ರಗಾರಿಕೆ ಮಾಡಬೇಕು. ಆತುರವಾಗಿ ಮಾಡುತ್ತಿರುವುದು ತಪ್ಪೋ ಸರಿಯೋ ಎಂಬ ಚರ್ಚೆ ಬೇಡ. 15 ದಿನಗಳಲ್ಲಿ ಮಾಡಲಾಗದು ಎಂಬ ವಿಷಯ ನಿಮಗೆ ಬೇಡ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.