ADVERTISEMENT

385 ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಪೂರ್ಣ: ಗೌರವ ಗುಪ್ತ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2021, 3:12 IST
Last Updated 22 ಸೆಪ್ಟೆಂಬರ್ 2021, 3:12 IST
ಯಶವಂತಪುರದ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಹದಗೆಟ್ಟಿರುವ ತುಮಕೂರು ಮುಖ್ಯರಸ್ತೆ -ಪ್ರಜಾವಾಣಿ ಚಿತ್ರಗಳು/ ಎಂ.ಎಸ್‌.ಮಂಜುನಾಥ್‌
ಯಶವಂತಪುರದ ‘ನಮ್ಮ ಮೆಟ್ರೊ’ ನಿಲ್ದಾಣದ ಬಳಿ ಹದಗೆಟ್ಟಿರುವ ತುಮಕೂರು ಮುಖ್ಯರಸ್ತೆ -ಪ್ರಜಾವಾಣಿ ಚಿತ್ರಗಳು/ ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳು ಸೇರಿ ಒಟ್ಟು 470 ರಸ್ತೆಗಳಿದ್ದು, ಅವುಗಳಲ್ಲಿ 385 ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಪೂರ್ಣಗೊಂಡಿದೆ. ವೈಟ್ ಟಾಪಿಂಗ್, ಟೆಂಡರ್ ಶ್ಯೂರ್, ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿರುವ ರಸ್ತೆಗಳು ಸೇರಿದಂತೆ ಒಟ್ಟು 85 ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ರಸ್ತೆಗುಂಡಿಗಳನ್ನು ಮುಚ್ಚುವ ಸಲುವಾಗಿ ಸೋಮವಾರ ರಾತ್ರಿ ಪರಿಶೀಲನಾ ಸಭೆ ನಡೆಸಲಾಯಿತು. ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳಲ್ಲಿ ಕೆಲವು ಕಡೆ ವೈಟ್ ಟಾಪಿಂಗ್, ಟೆಂಡರ್ ಶ್ಯೂರ್, ಸ್ಮಾರ್ಟ್ ಸಿಟಿ, ಮೆಟ್ರೊ ಕಾಮಗಾರಿ ನಡೆಯುತ್ತಿವೆ. ಈ ಕಾಮಗಾರಿಗಳು ಪೂರ್ಣಗೊಂಡಿರುವ ರಸ್ತೆಗಳ ದೋಷ ಮುಕ್ತಗೊಳಿಸುವ ಹೊಣೆಗಾರಿಕೆ ಅವಧಿ ಚಾಲ್ತಿಯಲ್ಲಿದೆಯೇ ಎಂದು ಪರಿಶೀಲಿಸುತ್ತಿದ್ದೇವೆ. ಅವಧಿ ಚಾಲ್ತಿಯಲ್ಲಿರುವ ರಸ್ತೆಗಳನ್ನು ಗುತ್ತಿಗೆದಾರರಿಂದಲೇ ದುರಸ್ತಿ ಮಾಡಿಸಲಿದ್ದೇವೆ’ ಎಂದರು.

‘ಜಲಮಂಡಳಿ, ಬೆಸ್ಕಾಂ ವತಿಯಿಂದಲೂ ಕೆಲವು ರಸ್ತೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಬಿಬಿಎಂಪಿ ಹೊರವಲಯದ 110 ಹಳ್ಳಿಗಳಿಗೆ ನೀರಿನ ಸಂಪರ್ಕ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರಸ್ತೆಗಳನ್ನು ಕತ್ತರಿಸಲಾಗಿದೆ. ಇವುಗಳ ದುರಸ್ತಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

‘ಜಲಮಂಡಳಿಯವರು ಕೊಳವೆ ಅಳವಡಿಕೆಗಾಗಿ ಕತ್ತರಿಸಿರುವ ರಸ್ತೆಗಳ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಶೀಘ್ರವೇ ಈ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ರಸ್ತೆಗುಂಡಿಗಳ ಕಾರಣದಿಂದಾಗಿ ಮೃತಪಟ್ಟರೆ, ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಲು ಪ್ರತ್ಯೇಕ ವ್ಯವಸ್ಥೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

–0–

ರಸ್ತೆ ದುರಸ್ತಿ– ಬಿಬಿಎಂಪಿಯ ತೀರ್ಮಾನಗಳು

ನಗರದಲ್ಲಿರುವ ಕೆಲವು ಪ್ರಮುಖ ರಸ್ತೆಗಳನ್ನು ಹಲವಾರು ವರ್ಷದಿಂದ ಬೇರೆ ಬೇರೆ ಕಾರಣಗಳಿಂದ ನಿರ್ವಹಣೆ ಮಾಡಿಲ್ಲ. ಹಾಗಾಗಿ ಅವುಗಳು ಹದಗೆಟ್ಟಿವೆ. ಈ ಪೈಕಿ ಹೆಚ್ಚು ಸಂಚಾರ ದಟ್ಟಣೆಯಿರುವ ರಸ್ತೆಗಳನ್ನು ಗುರುತಿಸಿ ಆದ್ಯತೆ ಮೇರೆಗೆ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೋಮವಾರ ರಾತ್ರಿ ನಡೆದ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯ ಪ್ರಮುಖ ನಿರ್ಧಾರಗಳು ಇಂತಿವೆ.

* ನಗರದ ಜಯಮಹಲ್ ರಸ್ತೆಯನ್ನು ತಕ್ಷಣವೇ ಡಾಂಬರೀಕರಣ ನಡೆಸುವುದು.

* ಬಸಪ್ಪ ವೃತ್ತದಿಂದ ಡೇರಿ ವೃತ್ತದವರೆಗಿನ ಮರಿಗೌಡ ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಂಬರೀಕರಣ ನಡೆಸುವುದು.

* ಕೆಂಗಲ್ ಹನುಮಂತಯ್ಯ ರಸ್ತೆ ರಿಚ್‌ಮಂಡ್ ವೃತ್ತದಿಂದ ಲಾಲ್‌ಬಾಗ್ ಗೇಟ್‌ವರೆಗೆ ಡಾಂಬರೀಕರಣ ನಡೆಸುವುದು.

* 110 ಹಳ್ಳಿಗಳ ವ್ಯಾಪ್ತಿಯ ರಸ್ತೆಗಳಲ್ಲಿ ರಸ್ತೆ ಕತ್ತರಿಸಿದ ಭಾಗಗಳ ದುರಸ್ತಿಗೆ ಶೀಘ್ರವೇ ಟೆಂಡರ್ ಕರೆಯುವುದು.

* ಹೊರವರ್ತುಲ ರಸ್ತೆಯಲ್ಲಿ ಗೊರಗುಂಟೆಪಾಳ್ಯದಿಂದ ರಾಜಕುಮಾರ್ ಸಮಾಧಿಯವರೆಗೆ ಯೋಜನೆ-ಕೇಂದ್ರ ವಿಭಾಗದಿಂದ ಶೀಘ್ರವೇ ಡಾಂಬರೀಕರಣ ಕಾಮಗಾರಿ ಕೈಗೊಳ್ಳುವುದು.

* ತುಮಕೂರು ರಸ್ತೆ, ಯಶವಂತಪುರದಿಂದ ಗೊರಗುಂಟೆಪಾಳ್ಯ ಜಂಕ್ಷನ್‌ವರೆಗೆ ಡಾಂಬರೀಕರಣ ನಡೆಸುವುದು.

–0–

ಅಂಕಿ ಅಂಶ

1,344 ಕಿ.ಮೀ

ನಗರದಲ್ಲಿರುವ ಮುಖ್ಯ ಹಾಗೂ ಉಪಮುಖ್ಯ ರಸ್ತೆಗಳ ಒಟ್ಟು ಉದ್ದ

1,120 ಕಿ.ಮೀ

ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ಪೂರ್ಣಗೊಂಡ ರಸ್ತೆಗಳ ಒಟ್ಟು ಉದ್ದ

224 ಕಿ.ಮೀ

ಗುಂಡಿ ಮುಚ್ಚುವ ಕಾಮಗಾರಿ ಬಾಕಿ ಇರುವ ರಸ್ತೆಗಳ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.