ADVERTISEMENT

ಮುಚ್ಚದ ರಸ್ತೆ ಗುಂಡಿ: ಸರ್ಕಾರದ ವಿರುದ್ಧ ಎಎಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 18:18 IST
Last Updated 29 ಜನವರಿ 2022, 18:18 IST
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮಲ್ಲೇಶ್ವರದ ಪೈಪ್‌ಲೈನ್‌ ರಸ್ತೆಯ ಗುಂಡಿಗಳ ಸುತ್ತ ರಂಗೋಲಿ ಬಿಡಿಸಿ ಆಕ್ರೋಶ ವ್ಯಕ್ತಪಡಿಸಿದರು–ಪ್ರಜಾವಾಣಿ ಚಿತ್ರ
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮಲ್ಲೇಶ್ವರದ ಪೈಪ್‌ಲೈನ್‌ ರಸ್ತೆಯ ಗುಂಡಿಗಳ ಸುತ್ತ ರಂಗೋಲಿ ಬಿಡಿಸಿ ಆಕ್ರೋಶ ವ್ಯಕ್ತಪಡಿಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ರಸ್ತೆಗಳ ಗುಂಡಿಗಳನ್ನು ಮುಚ್ಚುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ವಿರುದ್ಧ ಆಮ್‌ ಆದ್ಮಿ‍ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ನಗರದ ಎಲ್ಲಾ ವಾರ್ಡ್‌ಗಳ ರಸ್ತೆಗಳಲ್ಲೂ ಗುಂಡಿಗಳ ಸುತ್ತ ರಂಗೋಲಿ ಬಿಡಿಸುವ ಮೂಲಕ ಎಎಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.

ಎಎಪಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ, ‘ನಗರದ ರಸ್ತೆಗಳ ಅಭಿವೃದ್ಧಿಗೆ ಈವರೆಗೆ ₹20 ಸಾವಿರ ಕೋಟಿ ವೆಚ್ಚ ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ಸರ್ಕಾರವು ರಸ್ತೆಗಳ ಅಭಿವೃದ್ಧಿಗೆ ಮತ್ತೆ ₹6,500 ಕೋಟಿ ಖರ್ಚು ಮಾಡಲು ನಿರ್ಧರಿಸಿದೆ. ಜನಪ್ರತಿನಿಧಿಗಳು ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡದೆ ಆ ಹಣವನ್ನು ತಮ್ಮ ಜೇಬಿಗೆ ಹಾಕಿಕೊಳ್ಳುತ್ತಾರೆ’ ಎಂದು ದೂರಿದರು.

ADVERTISEMENT

‘ಬಿಬಿಎಂಪಿಯು ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ತಪ್ಪು ಮಾಹಿತಿ ನೀಡಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದೆ. ರಸ್ತೆ ದುರಸ್ತಿಗೊಳಿಸುತ್ತಿರುವುದಾಗಿ ಸರ್ಕಾರ ಸುಳ್ಳು ಹೇಳುತ್ತಿದೆ. ಸರ್ಕಾರದ ಗಮನ ಸೆಳೆಯುವ ಸಲುವಾಗಿಯೇ ಗುಂಡಿಗಳ ಸುತ್ತ ರಂಗೋಲಿ ಬಿಡಿಸುವ ಕಾರ್ಯಕ್ರಮ ನಡೆಸಿದ್ದೇವೆ’ ಎಂದರು.

ಪಕ್ಷದ ಬೆಂಗಳೂರು ನಗರ ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ‘ರಸ್ತೆ ಗುಂಡಿಗಳಿಂದಾಗಿ ಒಂದು ವರ್ಷದಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಸಾಕಷ್ಟು ಜನ ಅಪಘಾತಗಳಲ್ಲಿ ಗಾಯಗೊಂಡಿದ್ದಾರೆ. ಹೀಗಿದ್ದರೂ ಸರ್ಕಾರ ಹಾಗೂ ಬಿಬಿಎಂಪಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಳಪೆ ಕಾಮಗಾರಿಯಿಂದಾಗಿ ದುರಸ್ತಿಪಡಿಸಲಾದ ರಸ್ತೆಗಳಲ್ಲಿ ಮತ್ತೆ ಗುಂಡಿಗಳಾಗಿವೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ’ ಎಂದರು.

ಪಕ್ಷದ ಮುಖಂಡರಾದ ಬಿ.ಟಿ.ನಾಗಣ್ಣ, ಜಗದೀಶ್‌ ವಿ. ಸದಂ, ರಾಜಶೇಖರ್‌ ದೊಡ್ಡಣ್ಣ, ಉಷಾ ಮೋಹನ್‌, ಜಗದೀಶ್‌ ಚಂದ್ರ, ಗೋಪಿನಾಥ್, ಗುರುಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.