ADVERTISEMENT

ವಂಚನೆ: ಪವರ್ ಬ್ಯಾಂಕ್ ಆ್ಯಪ್ ನಿರ್ವಹಣೆ ಕಂಪನಿ ವಿರುದ್ಧ ಎಫ್ಐಆರ್

ಸಾವಿರಾರು ಮಂದಿಗೆ ವಂಚನೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 17:33 IST
Last Updated 20 ಮೇ 2021, 17:33 IST

ಬೆಂಗಳೂರು: ದಿನದ ಲಾಭದ ಆಮಿಷವೊಡ್ಡಿ ಸಾವಿರಾರು ಜನರಿಂದ ಲಕ್ಷಾಂತರ ರೂಪಾಯಿ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಲಾಗಿದ್ದು, ಈ ಸಂಬಂಧ ಉತ್ತರ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆನ್ಸನ್‌ ಟೌನ್ ನಿವಾಸಿಯಾದ 47 ವರ್ಷದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ‘ಪವರ್ ಬ್ಯಾಂಕ್’ ಆ್ಯಪ್ ನಿರ್ವಹಣೆ ಮಾಡುತ್ತಿದ್ದ ಯುವಿಪಿಎಲ್‌ಎ ಟೆಕ್ನಾಲಜಿ ಕಂಪನಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಾಜ್ಯದಾದ್ಯಂತ ಸಾವಿರಾರು ಮಂದಿ ಹಣ ಹೂಡಿಕೆ ಮಾಡಿರುವ ಮಾಹಿತಿ ಇದೆ. ಮಹಿಳೆ ಮಾತ್ರ ಸದ್ಯ ದೂರು ನೀಡಿದ್ದು, ಉಳಿದಂತೆ ಬೇರೆ ಯಾವೆಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

‘ಹಲವು ವರ್ಷಗಳ ಹಿಂದೆಯೇ ಪವರ್ ಬ್ಯಾಂಕ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಆ್ಯಪ್‌ ಮೂಲಕ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವುದು ಕಂಪನಿಯ ಉದ್ದೇಶ. ಸಾರ್ವಜನಿಕರು ಆ್ಯಪ್‌ ಮೂಲಕ ಹೂಡಿಕೆ ಮಾಡಿದರೆ, ದಿನದ ಲಾಭದ ಲೆಕ್ಕದಲ್ಲಿ ಹಣ ವಾಪಸು ನೀಡುವುದಾಗಿ ಕಂಪನಿ ಭರವಸೆ ನೀಡಿತ್ತು. ಅದನ್ನು ನಂಬಿದ್ದ ಸರ್ಕಾರಿ ನೌಕರರು, ಖಾಸಗಿ ಕಂಪನಿ ಉದ್ಯೋಗಿಗಳು, ಆಟೊ ಚಾಲಕರು, ವ್ಯಾಪಾರಿಗಳು ಸೇರಿದಂತೆ ಹಲವರು ಹಣ ಹೂಡಿಕೆ ಮಾಡಿದ್ದರು’ ಎಂದೂ ಮೂಲಗಳು ಹೇಳಿವೆ.

ಏಕಾಏಕಿ ಆ್ಯಪ್‌ ಬಂದ್: ‘ಆರಂಭದಲ್ಲಿ ಕೆಲವೇ ಹೂಡಿಕೆದಾರರು ಇದ್ದರು. ಅವರಿಗೆ ಕಂಪನಿಯು ಉತ್ತಮ ಲಾಭ ನೀಡಿ ನಂಬಿಕೆ ಗಳಿಸಿತ್ತು. ಅದೇ ಹೂಡಿಕೆದಾರರು ತಮ್ಮ ಸಂಬಂಧಿಕರು ಹಾಗೂ ಪರಿಚಯಸ್ಥರಿಂದಲೂ ಆಯಾ ಯೋಜನೆಗಳಿಗೆ ತಕ್ಕಂತೆ ₹ 3 ಸಾವಿರದಿಂದ ಲಕ್ಷಾಂತರ ರೂಪಾಯಿವರೆಗೂ ಹೂಡಿಕೆ ಮಾಡಿಸಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಹೂಡಿಕೆದಾರರಿಗೆ ಕೆಲ ದಿನ ಮಾತ್ರ ಲಾಭ ನೀಡಿದ್ದ ಕಂಪನಿ, ಆರ್‌ಬಿಐ ನಿಯಮಗಳ ನೆಪ ಹೇಳಿ ಇತ್ತೀಚಿಗೆ ಆ್ಯಪ್‌ ಕಾರ್ಯವನ್ನೇ ಸ್ಥಗಿತಗೊಳಿಸಿದೆ. ಹೂಡಿಕೆದಾರರಿಗೆ ಹಣ ವಾಪಸು ನೀಡದೇ ಕಂಪನಿ ಪ್ರತಿನಿಧಿಗಳೂ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ನಡೆದಿದೆ’ ಎಂದೂ ಮೂಲಗಳು ಹೇಳಿವೆ.

₹ 1.75 ಲಕ್ಷ ಹೂಡಿಕೆ: ‘ದೂರು ನೀಡಿರುವ ಮಹಿಳೆ, ಏಪ್ರಿಲ್ 31ರಿಂದ ಮೇ 4ರ ಅವಧಿಯಲ್ಲಿ ಆ್ಯಪ್‌ ಮೂಲಕ ₹ 1.75 ಲಕ್ಷ ಹೂಡಿಕೆ ಮಾಡಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.