ಬೆಂಗಳೂರು: ನಗರದಲ್ಲಿ ಭಾನುವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಭಾರಿ ಮಳೆ ಸುರಿದ ಪರಿಣಾಮ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿದ್ದರಿಂದ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಯಿತು. ಮುಖ್ಯವಾಗಿ ನಗರದ ದಕ್ಷಿಣ ಭಾಗದಲ್ಲಿ ಹೆಚ್ಚು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಈ ಭಾಗ ಕತ್ತಲಲ್ಲಿ ಮುಳುಗಿತು.
ಬೆಂಗಳೂರು ದಕ್ಷಿಣದ ಐಟಿಐ ಲೇಔಟ್, ಮಂಗಮ್ಮನಪಾಳ್ಯ, ಬಿಟಿಎಂ ಲೇಔಟ್, ವಿಲ್ಸನ್ ಗಾರ್ಡನ್, ಜೆ.ಪಿ. ನಗರ, ತಲಘಟ್ಟಪುರ, ಕುಮಾರಸ್ವಾಮಿ ಲೇಔಟ್, ಬನಶಂಕರಿ ಎರಡನೇ ಹಂತ, ಕೋಡಿಚಿಕ್ಕನಹಳ್ಳಿ ಸುತ್ತ–ಮುತ್ತ 67ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರೆ, 76ಕ್ಕೂ ಹೆಚ್ಚು ಮರಗಳು ವಿದ್ಯುತ್ ಮಾರ್ಗದ ಮೇಲೆ ಬಿದ್ದಿದ್ದರಿಂದ ಕತ್ತಲು ಆವರಿಸಿತು.
ಪೂರ್ವ ವಿಭಾಗದ ಮಹದೇವಪುರ, ಕೆ.ಆರ್. ಪುರ,ಉತ್ತರದ ಮಹಾಲಕ್ಷ್ಮಿಲೇಔಟ್, ವಿಕಾಸ್ ಲೇಔಟ್, ಎಚ್ಎಂಟಿ ಲೇಔಟ್, ಮತ್ತಿಕೆರೆ, ಜಾಲಹಳ್ಳಿ, ಇಟ್ಟಿಗೆ ಫ್ಯಾಕ್ಟರಿ, ಲಗ್ಗೆರೆ ಮತ್ತು ಪಶ್ಚಿಮ ವಿಭಾಗದ ವಿ.ವಿ. ಪುರ, ರಾಜಾಜಿನಗರ, ಕಿರ್ಲೊಸ್ಕರ್ ಲೇಔಟ್, ಅಂಜನಾನಗರದಲ್ಲಿಯೂ ಮರ–ವಿದ್ಯುತ್ ಕಂಬ ಬಿದ್ದು ಸಮಸ್ಯೆಯಾಯಿತು.
‘ನಗರದಲ್ಲಿ ಭಾನುವಾರ ಸುರಿದ ಮಳೆಗೆ ಮಧ್ಯಾಹ್ನ 3ರಿಂದ ರಾತ್ರಿ 8.30ರ ಅವಧಿಯಲ್ಲಿ ಒಟ್ಟು 98 ವಿದ್ಯುತ್ ಕಂಬಗಳು ಮುರಿದಿವೆ. 128ಕ್ಕೂ ಹೆಚ್ಚು ಮರಗಳು ವಿದ್ಯುತ್ ಮಾರ್ಗದ ಮೇಲೆ ಉರುಳಿದಿದ್ದರಿಂದ ವಿದ್ಯುತ್ ವ್ಯತ್ಯಯವಾಗಿದೆ. ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಬೆಸ್ಕಾಂನ ಗ್ರಾಹಕ ವ್ಯವಹಾರಗಳ ಪ್ರಧಾನ ವ್ಯವಸ್ಥಾಪಕ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.