ADVERTISEMENT

ವಿದ್ಯುತ್ ದರ ಏರಿಕೆ: ಕೈಯಲ್ಲಿ ಹಣ ಇಲ್ಲ, ದುಡಿಮೆ ಇಲ್ಲ–ಶುಲ್ಕ ಕಟ್ಟುವುದು ಹೇಗೆ?

ಸಾರ್ವಜನಿಕರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 21:32 IST
Last Updated 9 ಜೂನ್ 2021, 21:32 IST
ವಿದ್ಯುತ್‌ ದರ ಹೆಚ್ಚಳ–ಪ್ರಾತಿನಿಧಿಕ ಚಿತ್ರ
ವಿದ್ಯುತ್‌ ದರ ಹೆಚ್ಚಳ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯ ಸರ್ಕಾರವು ಪ್ರತಿ ಯುನಿಟ್‌ಗೆ 30 ಪೈಸೆ ವಿದ್ಯುತ್‌ ದರ ಹೆಚ್ಚಿಸಿರುವುದು ಮತ್ತು ಏಪ್ರಿಲ್‌ನಿಂದಲೇ ಇದು ಅನ್ವಯವಾಗಲಿದೆ ಎಂದು ಹೇಳಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೈಯಲ್ಲಿ ದುಡ್ಡೇ ಇಲ್ಲದಿರುವಾಗ ಹೆಚ್ಚುವರಿ ವಿದ್ಯುತ್‌ ಶುಲ್ಕವನ್ನು ಭರಿಸುವುದು ಹೇಗೆ ಸಾರ್ವಜನಿಕರು ಕೇಳಿದರೆ, ವ್ಯಾಪಾರ–ವಹಿವಾಟು ಇಲ್ಲದೆ ಕಂಪನಿಗಳನ್ನು ಮುಚ್ಚುವ ಸ್ಥಿತಿಯಲ್ಲಿದ್ದೇವೆ. ಈ ಸಮಯದಲ್ಲಿ ವಿದ್ಯುತ್‌ ದರ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಉದ್ಯಮಿಗಳು ಅಳಲು ತೋಡಿಕೊಳ್ಳುತ್ತಾರೆ.

‘ಸಣ್ಣ ಕೈಗಾರಿಕೆಗಳಿಗೆ ಹೊರೆ’

ADVERTISEMENT

‘ಒಂದೂವರೆ ವರ್ಷಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಬಹಳ ತೊಂದರೆಗೆ ಸಿಲುಕಿವೆ. ಒಂದು ವರ್ಷದವರೆಗೆ ವಿದ್ಯುತ್‌ ದರವನ್ನು ಹೆಚ್ಚಿಸಬಾರದು, ಇರುವ ದರವನ್ನೂ ಕಡಿತಗೊಳಿಸಬೇಕು ಎಂದು ನಾವು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೂ ದರ ಏರಿಸಿರುವುದು ಸರಿಯಲ್ಲ’ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ ಅಧ್ಯಕ್ಷ ಕೆ.ಬಿ. ಅರಸಪ್ಪ ಅಸಮಾಧಾನ ವ್ಯಕ್ತಪಡಿಸಿದರು.

’ರಾಜ್ಯದಲ್ಲಿ 6.5 ಲಕ್ಷಕ್ಕೂ ಅಧಿಕ ಎಂಎಸ್‌ಎಂಇಗಳು ಇವೆ. ಈಗ ವಿದ್ಯುತ್‌ ದರ ಏರಿಕೆ ಮಾಡಿರುವುದರಿಂದ ಇದಕ್ಕೆ ಪೂರಕವಾಗಿ ನಿರ್ವಹಣಾ ವೆಚ್ಚವೂ ಹೆಚ್ಚಲಿದೆ. ಒಂದು ತಿಂಗಳಲ್ಲೇ ಪೆಟ್ರೋಲ್, ಡೀಸೆಲ್‌ ಬೆಲೆ ₹10 ಜಾಸ್ತಿ ಆಗಿದೆ. ಬೇರೆ ಎಲ್ಲ ರಾಜ್ಯಗಳಲ್ಲಿ ಸಣ್ಣ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ರಾಜ್ಯದಲ್ಲಿ ಮಾತ್ರ ರಫ್ತು ಆಧಾರದ ಬೃಹತ್‌ ಕೈಗಾರಿಕೆಗಳಿಗಷ್ಟೇ ಅವಕಾಶ ನೀಡಲಾಗಿದೆ. ಎಂಎಸ್‌ಇ ಬಗ್ಗೆ ನಿರ್ಲಕ್ಷ್ಯ ತಾಳಲಾಗುತ್ತಿದೆ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಒಂದೂವರೆ ತಿಂಗಳಿನಿಂದ ಲಾಕ್‌ಡೌನ್‌ ಇದೆ. ಕಟ್ಟಡದ ಬಾಡಿಗೆ, ಸಿಬ್ಬಂದಿಗೆ ವೇತನ, ಭವಿಷ್ಯ ನಿಧಿ, ವಿಮೆ, ಬ್ಯಾಂಕ್‌ ಸಾಲ ಪಾವತಿ ಮಾಡಬೇಕು. ಇಷ್ಟೊಂದು ಹೊರೆಯ ನಡುವೆಯೂ ವಿದ್ಯುತ್‌ ದರ ಏರಿಸಿದರೆ ಹೇಗೆ’ ಎಂದು ಅವರು ಪ್ರಶ್ನಿಸಿದರು.

’ಒಂದು ವರ್ಷ ದರ ಏರಿಸಬಾರದು’

‘ಲಾಕ್‌ಡೌನ್‌ ಘೋಷಿಸಿರುವುದು ಕೈಗಾರಿಕೆಗಳು ಸಾಮಾನ್ಯ ಸ್ಥಿತಿಗೆ ಮರಳಲು ಇನ್ನೂ ಎರಡು ವರ್ಷಗಳು ಬೇಕು. ಇಂತಹ ಸಂದರ್ಭದಲ್ಲಿ ವಿದ್ಯುತ್‌ ದರ ಏರಿಸಿರುವುದು ಸರ್ವಥಾ ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸತತವಾಗಿ ಇಂಧನ ಬೆಲೆ ಏರುತ್ತಿರುವುದರಿಂದ ಉತ್ಪಾದನಾ ವೆಚ್ಚವೂ ಜಾಸ್ತಿಯಾಗುತ್ತಿದೆ. ಲಾಕ್‌ಡೌನ್‌ ಮಾಡಿರುವುದರಿಂದ ನಮ್ಮ ವ್ಯಾಪಾರ ಕೂಡ (ಆರ್ಡರ್‌) ಬೇರೆ ರಾಜ್ಯದ ಪಾಲಾಗುತ್ತಿವೆ. ಮುಂದಿನ ವರ್ಷದವರೆಗೆ ವಿದ್ಯುತ್‌ ದರವನ್ನು ಯಾವುದೇ ಕಾರಣಕ್ಕೂ ಏರಿಸಬಾರದು’ ಎಂದು ಅವರು ಒತ್ತಾಯಿಸಿದರು.

‘ಬಡಮಧ್ಯಮ ವರ್ಗದವರಿಗೆ ಬರೆ’

’ಜನರಿಗೆ ತಿನ್ನುವುದಕ್ಕೆ ಆಹಾರ ಇಲ್ಲ. ಆಸ್ಪತ್ರೆ ಖರ್ಚು ಭರಿಸುವುದಕ್ಕೇ ಕಷ್ಟವಾಗುತ್ತಿದೆ. ಕೋವಿಡ್ ಬಂದು ಯಾರಾದರೂ ಐಸಿಯುಗೆ ದಾಖಲಾದರೆ ಕನಿಷ್ಠ ₹2 ಲಕ್ಷ ಕಟ್ಟಬೇಕಾಗುತ್ತದೆ. ಶಾಲೆಗೆ ಹೋಗಿರದಿದ್ದರೂ ಮಕ್ಕಳ ಫೀಸ್ ಕಟ್ಟಿ ಎಂದು ಶಾಲೆಗಳಿಂದ ಕರೆ ಬರುತ್ತಿದೆ. ಈ ನಡುವೆ, ವಿದ್ಯುತ್‌ ದರವನ್ನೂ ಹೆಚ್ಚಿಸಿದರೆ ಜನಸಾಮಾನ್ಯರು ಏನು ಮಾಡಬೇಕು’ ಎಂದು ಗೃಹಿಣಿ, ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ ಸದಸ್ಯರಾದ ವಸಂತಕವಿತಾ ಪ್ರಶ್ನಿಸಿದರು.

’ದುಡಿಮೆ ಇಲ್ಲದೆ ಬಡ–ಮಧ್ಯಮ ವರ್ಗದವರು ಕಷ್ಟಕ್ಕೆ ಸಿಲುಕಿದ್ದಾರೆ. ಒಂದೊಂದು ರೂಪಾಯಿ ಸಂಪಾದನೆಯೂ ಕಷ್ಟವಾಗಿರುವ ಈ ಸಂದರ್ಭದಲ್ಲಿ ದರ ಏರಿಸಿರುವುದು ಸರಿಯಲ್ಲ. ರಾಜ್ಯದ ಶಾಸಕರು ಪಕ್ಷಭೇದ ಮರೆತು ಸರ್ಕಾರದ ಈ ಕ್ರಮವನ್ನು ವಿರೋಧಿಸಬೇಕು’ ಎಂದು ಅವರು ಒತ್ತಾಯಿಸಿದರು.

’ಬಹಳಷ್ಟು ಜನರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿವೆ. ವಿದ್ಯುತ್‌ ಶುಲ್ಕ ಕಟ್ಟದಿದ್ದರೆ ಕರೆಂಟ್‌ ತೆಗೆಯಲಾಗುತ್ತದೆ. ಸರ್ಕಾರದ ಈ ಆದೇಶದಿಂದ ಬಡ–ಮಧ್ಯಮ ವರ್ಗದವರಿಗೆ ಮಾತ್ರವಲ್ಲದೆ, ರೈತರು ಕೂಡ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಶೂನ್ಯ ವರ್ಷ ಎಂದು ಪರಿಗಣಿಸಿ’

’ಜನರು ಮತ್ತು ಕೈಗಾರಿಕೆಗಳಿಗೆ ಆದಾಯವೇ ಇಲ್ಲದ ಸಂದರ್ಭದಲ್ಲಿ ದರ ಏರಿಕೆ ಮಾಡಿರುವುದು ಸೂಕ್ತ ಅಲ್ಲ. ನಗರದಲ್ಲಿ ಆಹಾರ ಉತ್ಪಾದಕ ಸಂಸ್ಥೆಗಳು ಸೇರಿದಂತೆ ಸಣ್ಣ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ಆದಾಯ, ತೆರಿಗೆ ಎಂದು ನೋಡಬಾರದು. ಈ ವರ್ಷವನ್ನು ಶೂನ್ಯ ವರ್ಷ ಎಂದು ಘೋಷಿಸಬೇಕು’ ಎಂದು ಬಿ ಪ್ಯಾಕ್ ಸಂಸ್ಥೆಯ ಸದಸ್ಯ ಎನ್. ಹರೀಶ್‌ ಹೇಳಿದರು.

‘ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ದರ ಏರಿಸುವ ಬದಲು ಇಳಿಸಬೇಕಾಗಿತ್ತು. ಬೇಕಾದರೆ ಮದ್ಯದ ದರ ಹೆಚ್ಚಿಸಿ, ಅಬಕಾರಿ ಶುಲ್ಕ ಜಾಸ್ತಿ ಮಾಡಲಿ. ಕುಡಿಯುವ ನೀರು, ವಿದ್ಯುತ್ ಮತ್ತು ಬಸ್‌ ಪ್ರಯಾಣ ದರವನ್ನು ಹೆಚ್ಚಿಸಬಾರದು’ ಎಂದೂ ಹೇಳಿದರು.

ಈ ಬಗ್ಗೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿಕೊಳ್ಳಲಾಗುವುದು’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಪೆರಿಕಲ್ ಎಂ. ಸುಂದರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎಲ್ಲರಿಗೂ ಸಂಕಷ್ಟ’

’ಕಾಯಂ ಉದ್ಯೋಗದಲ್ಲಿರುವವರನ್ನು ಬಿಟ್ಟರೆ ಉಳಿದ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಕೈ ಗಾಡಿಗಳಲ್ಲಿ ಪಾನಿಪುರಿ ಮಾರುತ್ತಿದ್ದವರು, ಬೇಕರಿಯವರು ತೊಂದರೆಗೆ ಸಿಲುಕಿದ್ದಾರೆ. ಅವರಿಗೆ ಆದಾಯವಿಲ್ಲ. ಆದರೆ, ಕಟ್ಟಡದ ಬಾಡಿಗೆ, ವಿದ್ಯುತ್‌ ಶುಲ್ಕ ತಪ್ಪದೇ ಪಾವತಿಸಬೇಕಾಗಿದೆ. ವಾಣ್ಯಜ್ಯೋದ್ಯಮಿಗಳು ಇನ್ನೂ ಹೆಚ್ಚಿನ ಶುಲ್ಕ ಪಾವತಿಸಬೇಕಾಗಿದೆ. ಲಾಕ್‌ಡೌನ್‌ ಅವಧಿಯ ವಿದ್ಯುತ್‌ ಮತ್ತು ನೀರಿನ ಶುಲ್ಕವನ್ನು ಸರ್ಕಾರ ತೆಗೆದುಕೊಳ್ಳಬಾರದು’ ಎಂದು ಗೃಹಿಣಿ ಜಿ. ಚೈತ್ರಾ ಸಲಹೆ ನೀಡಿದರು.

’ಅಗತ್ಯ ವಸ್ತುಗಳ ಬೆಲೆ ಜಾಸ್ತಿ ಆಗಿದೆ. ಆಟೊ–ಟ್ಯಾಕ್ಸಿ ಚಾಲಕರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾಗಿದ್ದಾರೆ. ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಕೆಳಮಧ್ಯಮ ವರ್ಗದವರಿಗೆ ಕುಟುಂಬ ನಿರ್ವಹಣೆಯೇ ಕಷ್ಟವಾಗಿರುವಾಗ ವಿದ್ಯುತ್ ದರ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ’ ಎಂದು ಅವರ ಅಸಮಾಧಾನ ವ್ಯಕ್ತಪಡಿಸಿದರು.

ಬೆಸ್ಕಾಂ: ಯುನಿಟ್‌ಗೆ 10 ಪೈಸೆ ಏರಿಕೆ

ಪರಿಷ್ಕೃತ ವಿದ್ಯುತ್‌ ದರದ ಅನ್ವಯ, ಬೆಸ್ಕಾಂನ ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್‌ಟಿ ಕೈಗಾರಿಕೆಗಳು ಅಥವಾ ಸಣ್ಣ ಕೈಗಾರಿಕೆಗಳಿಗೆ ಪ್ರತಿ ಯುನಿಟ್‌ಗೆ 10 ಪೈಸೆ ಏರಿಸಲಾಗಿದೆ. ಅಂದರೆ, ಪ್ರತಿ ಯುನಿಟ್‌ ಶುಲ್ಕ ಈಗ ₹6ಕ್ಕೆ ಏರಿದಂತಾಗಿದೆ. ಮೊದಲು ₹5.90 ಇತ್ತು.

ಈ ಕೈಗಾರಿಕೆಗಳು ಬಳಸುವ ಮೊದಲ 500 ಯುನಿಟ್‌ಗೆ ಮಾತ್ರ ₹6 ನಿಗದಿ ಪಡಿಸಲಾಗಿದೆ. 500 ಯುನಿಟ್‌ನ ನಂತರದ ಬಳಕೆಗೆ ಪ್ರತಿ ಯುನಿಟ್‌ಗೆ ₹7.30 ಕಟ್ಟಬೇಕಾಗುತ್ತದೆ. ಮೊದಲು ₹7.20 ಇತ್ತು.

ಬಿಬಿಎಂಪಿ ವ್ಯಾಪ್ತಿ ಬಿಟ್ಟು, ಬೆಸ್ಕಾಂನ ಇತರೆ ಕಡೆಗಳಲ್ಲಿನ ಎಲ್‌ಟಿ ಕೈಗಾರಿಕೆಗಳು ಮೊದಲ 500 ಯುನಿಟ್‌ವರೆಗೆ ಪ್ರತಿ ಯುನಿಟ್‌ಗೆ ₹5.70 ಪಾವತಿಸಬೇಕಾಗುತ್ತದೆ. ಮೊದಲು ಈ ದರ ₹5.60 ಇತ್ತು. 501ರಿಂದ 1000 ಯುನಿಟ್‌ಗೆ ₹6.65 ಮತ್ತು 1000 ಯುನಿಟ್‌ ನಂತರ ₹6.95 ಪಾವತಿಸಬೇಕಾಗುತ್ತದೆ.

ಬೆಸ್ಕಾಂನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಬೃಹತ್‌ ಕೈಗಾರಿಕೆಗಳು ಅಂದರೆ ಎಚ್‌ಟಿ ಕೈಗಾರಿಕೆಗಳು ಪ್ರತಿ ಯುನಿಟ್‌ಗೆ ₹7.45 ಪಾವತಿಸಬೇಕಾಗುತ್ತದೆ. ಮೊದಲು ಈ ದರ ₹7.35 ಇತ್ತು. ಗೃಹೋಪಯೋಗಿ ಬಳಕೆಯ ವಿದ್ಯುತ್‌ ದರವನ್ನೂ ಯುನಿಟ್‌ಗೆ 10 ಪೈಸೆ ಹೆಚ್ಚಿಸಲಾಗಿದೆ.

ಜನರ ಮೇಲೆ ದೌರ್ಜನ್ಯ: ಎಚ್‌ಡಿಕೆ

ಬೆಂಗಳೂರು: ವಿದ್ಯುತ್‌ ದರ ಏರಿಕೆ ಮತ್ತು ಬಾಕಿ ವಸೂಲಿ ನಿರ್ಧಾರದ ಮೂಲಕ ರಾಜ್ಯ ಸರ್ಕಾರವು ಜನರ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ದೂರಿದ್ದಾರೆ.

ದರ ಏರಿಕೆಗೆ ಪ್ರತಿಕ್ರಿಯಿಸಿ ಬುಧವಾರ ಟ್ವೀಟ್‌ ಮಾಡಿರುವ ಅವರು, ‘ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಜನರನ್ನು ಪ್ಯಾಕೇಜ್‌ ಹೆಸರಿನಲ್ಲಿ ವಂಚಿಸಲಾಗಿತ್ತು. ಈಗ ದರ ಏರಿಸಿ ಜನರನ್ನು ಸುಲಿಯುತ್ತಿದೆ. ಬಿಜೆಪಿ ತೋರಿದ ಅಚ್ಚೇ ದಿನದ ಕನಸು ಇದೇನಾ’ ಎಂದು ಪ್ರಶ್ನಿಸಿದ್ದಾರೆ.

ನರಕಕ್ಕೆ ದೂಡಲು ಮುಂದಾದ ಸರ್ಕಾರ: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ‘ವಿದ್ಯುತ್‌ ದರ ಹೆಚ್ಚಿಸುವ ಮೂಲಕ, ಈಗಾಗಲೇ ಕೊರೊನಾದಿಂದ ತತ್ತರಿಸುತ್ತಿರುವ ಜನರನ್ನು ಬೆಲೆ ಏರಿಕೆಯ ನರಕಕ್ಕೆ ದೂಡಲು ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ಸರ್ಕಾರ ತಕ್ಷಣ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಪರಿಣತರು ಮತ್ತು ವಿರೋಧ ಪಕ್ಷಗಳ ಮುಖಂಡರ ಸಭೆ ಕರೆದು ದರ ಕಡಿಮೆ ಮಾಡುವುದು ಹೇಗೆ ಎಂದು ಸಲಹೆ ಪಡೆಯಬೇಕು. ಅಲ್ಲಿಯವರೆಗೆ ಹೆಚ್ಚಿಸಬಾರದು’ ಎಂದು ಒತ್ತಾಯಿಸಿದ್ದಾರೆ.

‘ಕಳೆದ ವರ್ಷ ಹೆಚ್ಚಿಸಿದ್ದ ದರಗಳನ್ನು ಅನುಷ್ಠಾನ ಮಾಡಿಲ್ಲ. ಹೀಗಾಗಿ, ಈ ವರ್ಷ ದರ ಹೆಚ್ಚಿಸಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛ್ಚಕ್ತಿ ನಿಯಂತ್ರಣ ಆಯೋಗ ಸುಳ್ಳು ಹೇಳಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲೂ ಕಳೆದ ವರ್ಷ ಕೂಡಾ ವಿದ್ಯುತ್‌ ದರ ಹೆಚ್ಚಿಸಲಾಗಿದೆ’ ಎಂದಿದ್ದಾರೆ. ‘ಮೂರು ವರ್ಷಗಳಿಂದ ವಿದ್ಯುತ್ ಬಳಕೆ ಅಧೋಗತಿಗೆ ಇಳಿದಿದೆ. ಈ ಸಂದರ್ಭದಲ್ಲಿ ವಿದ್ಯುಚ್ಛಕ್ತಿ ಬಳಕೆಯನ್ನು ಉತ್ತೇಜಿಸಬೇಕಾದ ಅನಿವಾರ್ಯತೆ ಇದೆ. ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ ಉತ್ಪಾದನೆಯಲ್ಲಿ ಮೂರನೇ ಎರಡು ಭಾಗದಷ್ಟು ಸೋಲಾರ್ ಮತ್ತು ಗಾಳಿ ಮೂಲದಿಂದ ಉತ್ಪಾದನೆ ಆಗುತ್ತಿದೆ. ಹೀಗಾಗಿ, ವಿದ್ಯುತ್ ದರಗಳನ್ನು ಇಳಿಸಿ ಬಳಕೆಯನ್ನು ಪ್ರೋತ್ಸಾಹಿಸಬೇಕಾದ ಸರ್ಕಾರ, ಹೆಚ್ಚು ಬಳಸುತ್ತಿದ್ದಾರೆಂದು ದಂಡ ವಿಧಿಸುವುದು ಹಾಗೂ ಪದೇ ಪದೇ ದರಗಳನ್ನು ಹೆಚ್ಚಿಸುತ್ತಿದೆ. ದರ ಏರಿಕೆಯಿಂದ ಕುಡಿಯುವ ನೀರಿನಿಂದ ಹಿಡಿದು ಎಲ್ಲದರ ಬೆಲೆಗಳೂ ಹೆಚ್ಚಾಗುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಜನರ ಮೇಲೆ ವಿದ್ಯುತ್ ಏರಿಕೆಯ ಬರೆ ಹಾಕದೇ ಕಷ್ಟ ಕಾಲದಲ್ಲಿ ತೆರಿಗೆಯ ಹೊರೆ ಇಳಿಸಿ, ಆರ್ಥಿಕತೆಗೆ ಚೈತನ್ಯ ನೀಡಬೇಕೆಂದು ನಾನು ಹಿಂದೆ ಆಗ್ರಹಿಸಿದ್ದೆ. ಅವಧಿ ಮುಗಿದಿರುವ ವಿದ್ಯುತ್ ಒಪ್ಪಂದಗಳನ್ನು ಕೂಡಲೇ ರದ್ದು ಮಾಡಿ ಎಂದೂ ಒತ್ತಾಯಿಸಿದ್ದೆ. ಆದರೆ, ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.