ADVERTISEMENT

‘ಪವರ್ ಟಿ.ವಿ’ ಕಚೇರಿ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 20:30 IST
Last Updated 29 ಸೆಪ್ಟೆಂಬರ್ 2020, 20:30 IST
   

ಬೆಂಗಳೂರು: 'ಟೆಂಡರ್ ಕೊಡಿಸುವುದಾಗಿ ಹೇಳಿ ವಂಚಿಸಿ, ಜೀವ ಬೆದರಿಕೆ ಹಾಕಿದ್ದಾರೆ' ಎಂಬ ಆರೋಪದ ಮೇಲೆ 'ಪವರ್ ಟಿ.ವಿ.' ಸುದ್ದಿವಾಹಿನಿ ಕಚೇರಿ ಮೇಲೂ ಸೋಮವಾರ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿ ನಿರ್ದೇಶಕ ಚಂದ್ರಕಾಂತ್ ಅವರು ನೀಡಿದ್ದ ದೂರಿನಡಿ ವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ ಹಾಗೂ ಇತರರ ವಿರುದ್ಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಇತ್ತೀಚೆಗಷ್ಟೇ ಎಫ್ಐಆರ್ ದಾಖಲಾಗಿತ್ತು.
ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು.

ಸೋಮವಾರ ಬೆಳಿಗ್ಗೆ ರಾಕೇಶ್ ಶೆಟ್ಟಿ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ, ತಡರಾತ್ರಿ ವಾಹಿನಿಯ ಕಚೇರಿ ಮೇಲೂ ದಾಳಿ ಮಾಡಿದೆ. ಸದ್ಯ ರಾಕೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ.

ADVERTISEMENT

'ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ವಾಹಿನಿಯ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟ ಮಾಹಿತಿಯುಳ್ಳ ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರಸಾರ ಸ್ಥಗಿತ: ವಾಹಿನಿ ಪ್ರಸಾರಕ್ಕೆ ಅಗತ್ಯವಾಗಿದ್ದ ಕಂಪ್ಯೂಟರ್‌ಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಹೀಗಾಗಿ, ತಡರಾತ್ರಿಯಿಂದಲೇ ವಾಹಿನಿಯ ಪ್ರಸಾರ ಸ್ಥಗಿತಗೊಂಡಿದೆ ಎಂದು ವಾಹಿನಿಯ ಆಡಳಿತ ಮಂಡಳಿ ಹೇಳಿದೆ.

'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದಕ್ಕೆ ವಾಹಿನಿ ಮೇಲೆ ಪ್ರತೀಕಾರ ತೀರಿಸಿಕೊಳ್ಳಲಾಗುತ್ತಿದೆ. ಕಚೇರಿಯಲ್ಲಿ ತಪಾಸಣೆ ನಡೆಸಲು ನ್ಯಾಯಾಲಯವು ಷರತ್ತುಬದ್ಧ ವಾರಂಟ್ ನೀಡಿತ್ತು. ಆದರೆ, ಸಿಸಿಬಿ ಪೊಲೀಸರು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಅಧಿಕಾರ ದುರುಪಯೋಗವಾಗುತ್ತಿದೆ’ ಎಂದು ವಾಹಿನಿಯ ಆಡಳಿತ ಮಂಡಳಿ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.