ಕೆ.ಆರ್.ಪುರ: ಸುಪ್ರೀಂ ಕೋರ್ಟ್ ಅದೇಶವನ್ನು ಉಲ್ಲಂಘಿಸಿ ಹಸಿರು ವ್ಯಾಪ್ತಿಯ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳಿಗೆ ನೀಡಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಪ್ರಜಾ ವಿಮೋಚನ ಚಳವಳಿಯ ಕಾರ್ಯಕರ್ತರು ಆವಲಹಳ್ಳಿಯ ಉಪವಿಭಾಗದ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
‘ಹಸಿರು ವ್ಯಾಪ್ತಿಯ ಭೂಮಿಗಳಲ್ಲಿ ಖಾಸಗಿ ಬಡಾವಣೆ ನಿರ್ಮಾಣ ಮಾಡುವಂತಿಲ್ಲ. ಒಂದು ವೇಳೆ ಖಾಸಗಿ ಬಡಾವಣೆಯಲ್ಲಿ ಕಾನೂನು ಬಾಹಿರವಾಗಿ ಕಟ್ಟಿಕೊಂಡಿರುವ ಮನೆಗಳಿಗೆ ಅಕ್ರಮವಾಗಿ ಸಂಪರ್ಕ ನೀಡಿರುವ ಅಧಿಕಾರಿಗಳ ವಿರುದ್ಧ ನ್ಯಾಯಾಂಗನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಬೇಕು’ ಎಂದು ಪ್ರಜಾ ವಿಮೋಚನ ಚಳವಳಿಯ ರಾಜ್ಯ ಘಟಕದ ಅಧ್ಯಕ್ಷ ಅನೇಕಲ್ ಕೃಷ್ಣಪ್ಪ ಹೇಳಿದರು.
‘ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ, ಬೈಯಪ್ಪನಹಳ್ಳಿ ಆದೂರು, ಚಿಮ್ಮಸಂದ್ರ ಸೇರಿದಂತೆ ಮುಂತಾದ ಕಡೆಗಳಲ್ಲಿ ಹಸಿರು ವ್ಯಾಪ್ತಿಯಲ್ಲಿ ಬಿಲ್ಡರ್‌ಗಳು ತಮ್ಮ ಪ್ರಭಾವ ಬಳಸಿ ಕಾನೂನುಬಾಹಿರವಾಗಿ ಖಾಸಗಿ ಬಡಾವಣೆಗಳನ್ನು ನಿರ್ಮಿಸಿ ಜನರಿಗೆ ಮಾರಾಟ ಮಾಡಿದ್ದಾರೆ. ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದರು.
ಸ್ಥಳೀಯ ಮುಖಂಡರಾದ ಹೂಡಿ ನಾಗರಾಜ್, ಎಸ್ ಕೆ ಮಾದೇಶ್, ಗುಂಜೂರು ವಿಜಯ್, ಆದೂರ್ ಗಣೇಶ್, ರಜಿಯಾ ಬೇಗಂ, ಗುಲಾಬ್ ಜಾನ್, ವೆಂಕಟರಣಪ್ಪ, ಆನೇಕಲ್ ತಾಲ್ಲೂಕಿನ ಮುಖಂಡರಾದ ಹಳೆಹಳ್ಳಿ ರವಿ, ಸಬ್ ಮಂಗಲ ರವಿ, ಲವ, ವೆಂಕಟೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.