ADVERTISEMENT

ಎಡ್ಯುವರ್ಸ್‌: ಒಂದೇ ಸೂರಿನಡಿ ಸಮಗ್ರ ಮಾಹಿತಿ- 50ಕ್ಕೂಮೀರಿ ಶಿಕ್ಷಣ ಸಂಸ್ಥೆ ಭಾಗಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 19:40 IST
Last Updated 2 ಜುಲೈ 2022, 19:40 IST
‘ಎಡ್ಯುವರ್ಸ್‌: ಜ್ಞಾನದೇಗುಲ’ ಶೈಕ್ಷಣಿಕ ಮೇಳದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು – ಪ್ರಜಾವಾಣಿ ಚಿತ್ರಗಳು
‘ಎಡ್ಯುವರ್ಸ್‌: ಜ್ಞಾನದೇಗುಲ’ ಶೈಕ್ಷಣಿಕ ಮೇಳದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು – ಪ್ರಜಾವಾಣಿ ಚಿತ್ರಗಳು   

ಬೆಂಗಳೂರು:ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಬಿಎ, ಎಂಸಿಎ, ಫ್ಯಾಷನ್ ಡಿಸೈನ್, ಕಾನೂನು... ಹೀಗೆ ವಿವಿಧ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ‘ಎಡ್ಯುವರ್ಸ್‌: ಜ್ಞಾನದೇಗುಲ’ ಶೈಕ್ಷಣಿಕ ಮೇಳವು ಮಾಹಿತಿ ಒದಗಿಸಿತು.

ಜಯಮಹಲ್ ಪ್ಯಾಲೇಸ್ ಹೋಟೆಲ್ ಗ್ರೌಂಡ್ಸ್‌ನಲ್ಲಿ ನಡೆಯುತ್ತಿರುವ12ನೇ ಆವೃತ್ತಿಯ ಈ ಮೇಳದಲ್ಲಿ 50ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮಳಿಗೆಗಳಿವೆ. ರಾಜ್ಯದ ವಿವಿಧ ಭಾಗಗಳ ಜತೆಗೆ ಮುಂಬೈ, ಪುಣೆ, ನವದೆಹಲಿ ಹಾಗೂ ಹೈದರಾಬಾದ್‌ನ ಶಿಕ್ಷಣ ಸಂಸ್ಥೆಗಳೂ ಪಾಲ್ಗೊಂಡಿರುವುದು ಈ ಬಾರಿಯ ವಿಶೇಷ.

ಬೆಳಿಗ್ಗೆ ನೋಂದಣಿ ಪ್ರಕ್ರಿಯೆಯೊಂದಿಗೆ ‘ಜ್ಞಾನ ದೇಗುಲ’ ಮೇಳ ಆರಂಭವಾಯಿತು. ವಿದ್ಯಾರ್ಥಿಗಳು ಹಾಗೂ ಪೋಷಕರ ದಂಡು ವಿಷಯ ತಜ್ಞರ ಉಪನ್ಯಾಸ ಮುಗಿಯುವವರೆಗೂ ಬರುತ್ತಲೇ ಇತ್ತು. ವಿವಿಧ ಕೋರ್ಸ್‌, ಕಾಲೇಜು, ಶುಲ್ಕಗಳ ಬಗೆಗೆ ಸಂಪನ್ಮೂಲ ವ್ಯಕ್ತಿಗಳು ನೀಡುತ್ತಿದ್ದ ಮಾಹಿತಿಗಳನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಕುತೂಹಲದಿಂದ ಕೇಳಿ, ಗೊಂದಲಗಳನ್ನು ಪರಿಹರಿಸಿಕೊಂಡರು.

ADVERTISEMENT

ವಿಷಯ ತಜ್ಞರ ಉಪನ್ಯಾಸ ಆಲಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರು, ಬಳಿಕ ವಿವಿಧ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳು ತೆರೆದಿದ್ದ ಮಳಿಗೆಗಳತ್ತ ಹೆಜ್ಜೆ ಹಾಕಿದರು. ಅವರ ನಿರೀಕ್ಷೆಗಳನ್ನು ತಣಿಸಲೆಂದೇ ಕಾಯ್ದಿದ್ದ ಮಳಿಗೆಯ ಪ್ರತಿನಿಧಿಗಳು, ತಮ್ಮ ಕಾಲೇಜುಗಳಲ್ಲಿ ನೀಡುವ ಸೌಲಭ್ಯಗಳು, ಶೈಕ್ಷಣಿಕ ಗುಣಮಟ್ಟ, ಬೋಧಕರ ಬದ್ಧತೆ, ಕ್ಯಾಂಪಸ್‌ನ ವೈಶಿಷ್ಟ್ಯ, ಕ್ಯಾಂಪಸ್ ಸಂದರ್ಶನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಿಳಿಸಿದರು.

ಕಾಲೇಜುಗಳ ಬಗ್ಗೆ ವಿಚಾರಿಸಿ, ಶುಲ್ಕ ವಿವರ ತಿಳಿದುಕೊಳ್ಳುವ ಕುತೂಹಲವನ್ನುವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತೋರಿದರು. ಕೋರ್ಸ್ ಮುಗಿದ ನಂತರ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ದೊರೆತರೆ ವೇತನ ಎಷ್ಟು ಸಿಗಬಹುದೆಂಬ ಲೆಕ್ಕಾಚಾರವೂ ಅವರ ಮಾತುಗಳಲ್ಲಿತ್ತು.

ಮೇಳದಲ್ಲಿ ಭಾಗವಹಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನವುಎಂಜಿನಿಯರಿಂಗ್ ಕಾಲೇಜುಗಳೇ ಆಗಿದ್ದವು.ಕಡಿಮೆ ಬಡ್ಡಿದರದಲ್ಲಿ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಬ್ಯಾಂಕ್‌ಗಳ ಪ್ರತಿನಿಧಿಗಳು ಮಾಹಿತಿ ನೀಡಿದರು.ಪ್ರದರ್ಶನ ಅಂಗಣದೊಳಗೆ ಹಲವಾರು ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾಲಯಗಳು ಟಿವಿ ಪರದೆ, ಕೈಪಿಡಿ, ಮಾಹಿತಿ ಪತ್ರ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆದರು.

‘ಯಾವ ಕೋರ್ಸ್‌ ಹಾಗೂ ಯಾವ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು ಎಂಬ ನಿರ್ಧಾರಕ್ಕೆ ಬರಲು ಈ ಶಿಕ್ಷಣ ಮೇಳ ನೆರವಾಯಿತು’ ಎಂದು ಹಲವು ವಿದ್ಯಾರ್ಥಿಗಳು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೇಳಕ್ಕೆ ಭಾನುವಾರತೆರೆ

ಜಯಮಹಲ್ ಪ್ಯಾಲೇಸ್ ಹೋಟೆಲ್ ಗ್ರೌಂಡ್ಸ್‌ನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಆಯೋಜಿಸಿರುವ 12ನೇ ಆವೃತ್ತಿಯ ‘ಎಡ್ಯುವರ್ಸ್‌: ಜ್ಞಾನದೇಗುಲ’ ಶೈಕ್ಷಣಿಕ ಮೇಳಕ್ಕೆ ಭಾನುವಾರ ತೆರೆ ಬೀಳಲಿದೆ. 9 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಬೆಳಿಗ್ಗೆ 11ಕ್ಕೆ ಕಾಮೆಡ್‌–ಕೆ ಬಗ್ಗೆ ವಿಶೇಷಾಧಿಕಾರಿ ಡಾ.ಶಾಂತಾರಾಮ್ ನಾಯಕ್ ಅವರು ಉಪನ್ಯಾಸ ನೀಡಲಿದ್ದಾರೆ. 11.30ಕ್ಕೆ ಸಿಇಟಿ ಬಗ್ಗೆ ಮಲ್ಲೇಶ್ವರದ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎ.ಎಸ್. ರವಿ ಅವರು ಮಾತನಾಡಲಿದ್ದಾರೆ.ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಲಭ್ಯವಿರುವ, ಪಿಯುಸಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗಿನ ಕೋರ್ಸ್‌ಗಳು ಹಾಗೂ ಸೀಟುಗಳ ಮಾಹಿತಿ ಈ ಮೇಳದಲ್ಲಿ ಲಭಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.