ಹೊಸಕೆರೆ ಕೆರೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಎಸ್.ಟಿ.ಸೋಮಶೇಖರ್
ರಾಜರಾಜೇಶ್ವರಿ ನಗರ: ಗಾಂಧಿನಗರ ಹೊಸಕೆರೆಯಲ್ಲಿ ಪ್ಲಾಸ್ಟಿಕ್, ಆಸ್ಪತ್ರೆಗಳ ವಿಷಪೂರಿತ ತ್ಯಾಜ್ಯ, ಬೃಹತ್ ನೀರುಗಾಲುವೆ ಮೂಲಕ ಒಳಚರಂಡಿ ನೀರು ಕೆರೆಗೆ ಸೇರುತ್ತಿರುವುದಕ್ಕೆ ಶಾಸಕ ಎಸ್.ಟಿ.ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
‘ಹೊಸಕೆರೆ ಕೆರೆಯ ಒಡಲಿಗೆ ತ್ಯಾಜ್ಯ’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಅವರು ನಗರ ಪಾಲಿಕೆ ಅಧಿಕಾರಿಗಳ ಜೊತೆಯಲ್ಲಿ ಸ್ಥಳಕ್ಕೆ ಭೇಟಿನೀಡಿ ಕೆರೆಯನ್ನು ಪರಿಶೀಲಿಸಿದರು.
‘ಕೆರೆ ಅಂಗಳ ಒತ್ತುವರಿ ತೆರವುಗೊಳಿಸಬೇಕು. ಮಳೆ ಬಂದಾಗ ಸಣ್ಣ ಪ್ರಮಾಣದಲ್ಲಿಯೂ ಕೆರೆಗೆ ಒಳಚರಂಡಿ ನೀರು ಬರದಂತೆ ತಪ್ಪಿಸಬೇಕು. ಒಳಚರಂಡಿ ನೀರು ಸಂಸ್ಕರಣೆ ಮಾಡಲು ಜಾಗವನ್ನು ಗುರುತಿಸಿ. ಕೆರೆಯ ಸಮಗ್ರ ಅಭಿವೃದ್ದಿಗೆ ಅಗತ್ಯ ಅನುದಾನವನ್ನು ಸರ್ಕಾರದಿಂದ ಒದಗಿಸುತ್ತೇನೆ’ ಎಂದು ಸೂಚಿಸಿದರು.
‘ಕೆರೆಯಲ್ಲಿರುವ ಪ್ಲಾಸ್ಟಿಕ್, ತ್ಯಾಜ್ಯವನ್ನು ತೆರವುಗೊಳಿಸಲಾಗುತ್ತಿದೆ. ಬೃಹತ್ ನೀರುಗಾಲುವೆಗೆ ಆಸ್ಪತ್ರೆಗಳ ತ್ಯಾಜ್ಯ, ಕೋಳಿ, ಮೇಕೆ, ಕುರಿ ತ್ಯಾಜ್ಯ ಸುರಿಯುವುದರಿಂದ ಮಳೆ ಬಂದಾಗ ಕೆರೆಗೆ ಸೇರುತ್ತಿದೆ. ಅದನ್ನು ತಡೆಯಲು ಕೆರೆಯ ಮೇಲ್ಬಾಗದಲ್ಲಿ ಜಾಲರಿ ಅಳವಡಿಸಲಾಗುವುದು’ ಎಂದು ಕೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಲ್.ಗೀತಾ ಮಾಹಿತಿ ನೀಡಿದರು.
‘ಕಾಲುವೆಗೆ ಒಳಚರಂಡಿ ನೀರು ಸೇರುವುದನ್ನು ತಪ್ಪಿಸುವಂತೆ ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು’ ಎಂದು ಬೃಹತ್ ನೀರುಗಾಲುವೆ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪರಮೇಶ್ ತಿಳಿಸಿದರು.
‘ಶೋಭಾ ಕರಂದ್ಲಾಜೆ ಅವರನ್ನು ಕರೆ ತನ್ನಿ’
ಕೆರೆ ಹಾಗೂ ಸರ್ಕಾರಿ ಭೂ ಸಂರಕ್ಷಣಾ ಸಮಿತಿ ಅಡಿಯಲ್ಲಿ ಕೆರೆ ಉಳಿಸಿ, ಸರ್ಕಾರಿ ಭೂಮಿ ರಕ್ಷಿಸಿ ಎಂದು ಹೇಳುತ್ತಲೇ ಕೆರೆ ಅಂಗಳದಲ್ಲಿ ಗಣೇಶನ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಸಮಿತಿಯ ಕದರಪ್ಪ ಅವರಿಗೆ ದೇವಸ್ಥಾನ ನಿರ್ಮಿಸಲು ಅನುಮತಿ ನೀಡಿದವರು ಯಾರು? ಇಲ್ಲಿ ದೇವಸ್ಥಾನ, ಸಮುದಾಯ ಭವನ ಸ್ವಂತ ಆಸ್ತಿಯನ್ನಾಗಿ ಮಾಡಿಕೊಳ್ಳಲು ಇದೇ ದಾರಿಯಾಗಲಿದೆ. ಕೇಂದ್ರ ಸಚಿವೆ ಶೋಭಾಕರಂದ್ಲಾಜೆ ಅವರನ್ನು ಕರೆದುಕೊಂಡು ಬಂದು ಕೆರೆ ತೋರಿಸಿ ಅಭಿವೃದ್ದಿಗೆ ಹಣ ಬಿಡುಗಡೆ ಮಾಡಿಸಿ ಎಂದು ಸೋಮಶೇಖರ್ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.