ಬೆಂಗಳೂರು: ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಮೇ 30ರಂದು ಹಮ್ಮಿಕೊಂಡಿರುವ ‘ಹಾಸನ ಚಲೋ’ ಕಾರ್ಯಕ್ರಮಕ್ಕೆ ಸಮುದಾಯ ಬೆಂಗಳೂರು ಹಾಗೂ ಸಮುದಾಯ ಕರ್ನಾಟಕ ಬೆಂಬಲ ಸೂಚಿಸಿದೆ.
ಸಂಸದ ಪ್ರಜ್ವಲ್ ರೇವಣ್ಣ ತನ್ನ ಬಲಾಡ್ಯ ಕುಟುಂಬದ ಕಾರಣಕ್ಕಾಗಿ ದೊರೆತಿರುವ ಜಾತಿಬಲ, ಹಣಬಲ ಮತ್ತು ಅಧಿಕಾರದ ದರ್ಪದಿಂದ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ಕ್ರಿಮಿನಲ್ ಸ್ವರೂಪದ ಲೈಂಗಿಕ ಹಿಂಸಾಚಾರಕ್ಕೆ ಗುರಿಪಡಿಸಿದ್ದನ್ನು ಮತ್ತು ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿರುವುದು ಖಂಡನೀಯ ಎಂದು ಸಮುದಾಯ ಬೆಂಗಳೂರು ಹಾಗೂ ಸಮುದಾಯ ಕರ್ನಾಟಕ ತಿಳಿಸಿದೆ.
ರಾಜಕೀಯವಾಗಿ ಇಡೀ ದೇಶದಲ್ಲೇ ಪ್ರಭಾವಶಾಲಿಯಾಗಿರುವ ಈ ಕುಟುಂಬದ ವಿರುದ್ದ ಈಗ ನಡೆಯುತ್ತಿರುವ ತನಿಖೆ ಏನೇನೂ ಸಾಲದು. ಪ್ರಜ್ವಲ್ ರೇವಣ್ಣನ ಪಾಸ್ ಪೋರ್ಟ್, ವೀಸಾ ರದ್ದುಗೊಳಿಸಿ, ಆತ ಅಡಗಿಕೊಂಡಿರುವ ದೇಶದ ಕಾನೂನು ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಆತನನ್ನು ಬಂಧಿಸಿ ನಮ್ಮ ನೆಲದ ಕಾನೂನಿಗೆ ಒಪ್ಪಿಸಬೇಕು. ಈ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಇಚ್ಚಾಶಕ್ತಿಯಿಂದ ಮಾಡಬೇಕು ಎಂದು ಆಗ್ರಹಿಸಿದೆ.
ದೂರುದಾರ ಮಹಿಳೆಯರ ಗೌಪ್ಯತೆ ಕಾಪಾಡಿ, ಅವರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕು. ನೊಂದ ಮಹಿಳೆಯರ ಫೋಟೊ, ವೀಡಿಯೋಗಳನ್ನು ಬಳಸದಂತೆ ಮಾಧ್ಯಮಗಳಿಗೆ ಸೂಚಿಸಬೇಕು. ತಪ್ಪಿದ್ದಲ್ಲಿ ಅಂತಹ ಮಾಧ್ಯಮ ಅಥವಾ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಪ್ರಜ್ವಲ್ ರೇವಣ್ಣನಿಂದ ಪೀಡನೆಗೆ ಒಳಗಾದ ಯುವತಿಯರನ್ನು ಹಾಸ್ಯಕ್ಕೆ ಬಳಸುವುದು, ಸಂತ್ರಸ್ತ ಮಹಿಳೆಯರ ಹೆಸರಿನಲ್ಲಿ ಜೋಕುಗಳನ್ನು ಹರಿಬಿಡುವ ಕಿಡಿಗೇಡಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಸಮುದಾಯ ಬೆಂಗಳೂರು ಕಾರ್ಯದರ್ಶಿ ಕಾವ್ಯ ಅಚ್ಯುತ್, ಸಮುದಾಯ ಕರ್ನಾಟಕ ಕಾರ್ಯದರ್ಶಿ ಮನೋಜ್ ವಾಮಂಜೂರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.