ADVERTISEMENT

ಶಾಮನೂರು ಜಾತಿಗೆ ಸೀಮಿತ ಆಗಬಾರದಿತ್ತು: ಪ್ರಕಾಶ್ ರಾಥೋಡ್

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 16:06 IST
Last Updated 6 ಅಕ್ಟೋಬರ್ 2023, 16:06 IST
<div class="paragraphs"><p>ಪ್ರಕಾಶ್ ರಾಥೋಡ್</p></div>

ಪ್ರಕಾಶ್ ರಾಥೋಡ್

   

ಬೆಂಗಳೂರು: ‘ತಮ್ಮ ಆಯಸ್ಸಿನ ಮುಕ್ಕಾಲು ಭಾಗವನ್ನು ಕಾಂಗ್ರೆಸ್‌ ಪಕ್ಷದಲ್ಲೇ ಕಳೆದಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಜಾತಿಗೆ ಸೀಮಿತವಾಗಿ ಮಾತನಾಡಿರುವುದು ಸರಿಯಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌ ಆಕ್ಷೇಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಸಾಮಾಜಿಕ ನ್ಯಾಯ ಕಾಂಗ್ರೆಸ್‌ ಪಕ್ಷದ ಜೀವಾಳ ಎಂಬುದನ್ನು ಶಾಮನೂರು ಅವರಿಗೆ ತಿಳಿಹೇಳುವ ಅಗತ್ಯವಿಲ್ಲ. ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗಗಳ ಜನರ ಕೊಡುಗೆಯನ್ನು ಮರೆತು ತಮ್ಮ ಸಮುದಾಯದವರಿಗೆ ಸೀಮಿತವಾಗಿ ಮಾತನಾಡಿರುವುದು ನೋವಿನ ಸಂಗತಿ’ ಎಂದಿದ್ದಾರೆ.

ADVERTISEMENT

ಸಂಪುಟದಲ್ಲಿ ಏಳು ಮಂದಿ ಲಿಂಗಾಯತರಿಗೆ ಅವಕಾಶ ಸಿಕ್ಕಿದೆ. ಇಬ್ಬರು ಮುಸ್ಲಿಮರಿಗೆ ಮಾತ್ರ ಸಚಿವ ಸ್ಥಾನ ದೊರಕಿದೆ. ಲಂಬಾಣಿ, ಉಪ್ಪಾರ, ಬಲಿಜಿಗ, ಯಾದವ ಸಮುದಾಯಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಈ ಎಲ್ಲ ಸಮುದಾಯದವರೂ ಶಿಸ್ತು ಮೀರದೆ ಬೇಡಿಕೆ ಮಂಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷದ ಧೋರಣೆ ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿ ಮಾತನಾಡಬಾರದು ಎಂದು ಆಗ್ರಹಿಸಿದ್ದಾರೆ.

‘ನೀವು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಒಂದೇ ಸಮುದಾಯ ಕಾರಣವಲ್ಲ. ಎಲ್ಲ ಸಮುದಾಯಗಳ ಬೆಂಬಲದಿಂದ ಅದು ಸಾಧ್ಯವಾಗಿದೆ. ಹೀಗಾಗಿ ಎಲ್ಲ ಸಮುದಾಯಗಳ ಪರವಾಗಿ ಮಾತನಾಡಬೇಕಿತ್ತು. ಒಂದು ಸಮುದಾಯದ ಬೆರಳೆಣಿಕೆಯಷ್ಟು ಅಧಿಕಾರಿಗಳ ಪರ ಮಾತನಾಡಬಾರದಿತ್ತು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.