ADVERTISEMENT

ತುರ್ತು ಪರಿಸ್ಥಿತಿಗಿಂತಲೂ ಈಗಿನ ಸ್ಥಿತಿ ಭೀಕರ: ಪ್ರೊ. ರವಿವರ್ಮ ಕುಮಾರ್

‘ಒಕ್ಕೂಟ ವ್ಯವಸ್ಥೆಗೆ ಧಕ್ಕೆ’ 

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 10:11 IST
Last Updated 25 ಜೂನ್ 2022, 10:11 IST
   

ಬೆಂಗಳೂರು: ‘ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ರಾಷ್ಟ್ರದಲ್ಲಿ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಈ ವ್ಯವಸ್ಥೆಯನ್ನೇ ನಾಶ ಪಡಿಸುವ ಹುನ್ನಾರಗಳೂ ನಡೆಯುತ್ತಿವೆ’ ಎಂದು ಡಾ.ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದ ವ್ಯವಸ್ಥಾಪಕ ಟ್ರಸ್ಟಿ ಪ್ರೊ.ರವಿವರ್ಮ ಕುಮಾರ್‌ ಆತಂಕ ವ್ಯಕ್ತಪಡಿಸಿದರು.

ರಾಮಮನೋಹರ ಲೋಹಿಯಾ ಸಮತಾ ವಿದ್ಯಾಲಯದಿಂದ ಶನಿವಾರ ಆಯೋಜಿಸಿದ್ದ ‘ತುರ್ತು ಪರಿಸ್ಥಿತಿ ನೆನಪಿನಲ್ಲಿ ಸಂವಿಧಾನ ಅವಲೋಕನ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಮೋದಿ ಅವರು ರಾತ್ರೋರಾತ್ರಿ ನೋಟು ಅಮಾನ್ಯದ ನಿರ್ಧಾರ ಕೈಗೊಂಡರು. ಆರ್‌ಬಿಐನ ಸಲಹೆಯನ್ನೇ ಪಡೆಯಲಿಲ್ಲ. ಟಿ.ವಿ ಮೂಲಕ ನೋಟು ಅಮಾನ್ಯೀಕರಣದ ಆದೇಶ ಹೊರಡಿಸಿದ್ದರು’ ಎಂದರು.

ADVERTISEMENT

‘ಈ ಹಿಂದಿನ ತುರ್ತು ಪರಿಸ್ಥಿತಿಗಿಂತಲೂ ಈಗಿನ ಸ್ಥಿತಿ ಭೀಕರವಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್‌ನಿಂದ ಸಾವಿರಾರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದರು. ಜಮ್ಮು–ಕಾಶ್ಮೀರದಲ್ಲಿ ಪರಿಸ್ಥಿತಿ ಸರಿಯಿಲ್ಲ. ನ್ಯಾಯಾಂಗವೂ ಸ್ಪಂದಿಸಲಿಲ್ಲ’ ಎಂದು ಹೇಳಿದರು.
‘ಬಿಜೆಪಿಯವರು ಇತಿಹಾಸವನ್ನೇ ಬಿಡುಮೇಲು ಮಾಡುತ್ತಿದ್ಧಾರೆ. ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಸ್ಫೂರ್ತಿ ತುಂಬುವ ಮಾತನಾಡಲಿಲ್ಲ. ಮುಂದಿನ ರಾಷ್ಟ್ರಪತಿ ಅಭ್ಯರ್ಥಿಯನ್ನು ರಬ್ಬರ್‌ ಸ್ಟ್ಯಾಂಪ್‌ ಮಾಡಿಕೊಳ್ಳಲು ಆಯ್ಕೆ ಮಾಡಿಕೊಂಡಂತಿದೆ’ ಎಂದರು.

ಚಿಂತಕ ಪ.ಮಲ್ಲೇಶ್‌ ಮಾತನಾಡಿ, ‘ಇಷ್ಟು ದಿವಸ ಜನರ ತಲೆಗೆ ಕೈಹಾಕಿದ್ದ ಮೋದಿ, ಜಿಎಸ್‌ಟಿ ಜಾರಿಗೊಳಿಸಿ ಜೇಬಿಗೂ ಕೈಹಾಕಿದ್ದಾರೆ. ಒಬ್ಬ ಹುಚ್ಚನಿಗೆ ಆಡಳಿತ ನೀಡಿದಂತಾಗಿದೆ. ಬಿಜೆಪಿ ಆಡಳಿತದಿಂದ ಇಡೀ ದೇಶದಲ್ಲಿ ತಲ್ಲಣದ ವಾತಾವರಣವಿದೆ. ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ಎಳೆಯ ಮಕ್ಕಳ ಮೇಲೆ ಹಿಂದುತ್ವದ ಹೇರುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.‌
ದಲಿತ ಸಂಘರ್ಷ ಸಮಿತಿಗಳು ಹಾಗೂ ರೈತ ಸಂಘಗಳು ರಾಷ್ಟ್ರದಲ್ಲಿ ಛಿದ್ರಗೊಂಡಿವೆ. ಅವುಗಳು ಒಂದೇ ಸೂರಿನಡಿ ಹೋರಾಟ ನಡೆಸಿದರೆ ಮಾತ್ರ ದೇಶಕ್ಕೆ ಉಳಿಗಾಲ ಎಂದು ಎಚ್ಚರಿಸಿದರು.

‘ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಹೇರುವ ದಿನಗಳು ದೂರ ಇಲ್ಲ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ದಾಸ್‌ ಆತಂಕ ವ್ಯಕ್ತಪಡಿಸಿದರು.

‘ಒಮ್ಮೆಯೂ ದೇಶ ಆರ್ಥಿಕ ತುರ್ತು ಪರಿಸ್ಥಿತಿಗೆ ಒಳಗಾಗಿಲ್ಲ. ಈಗಿನ ವಿದ್ಯಮಾನ ಗಮನಿಸಿದರೆ ಆರ್ಥಿಕ ತುರ್ತು ಪರಿಸ್ಥಿತಿ ಹೇರುವ ದಿನಗಳೂ ದೂರವಿಲ್ಲ ಎನಿಸುತ್ತಿದೆ’ ಎಂದರು.

‘ಹಿಂದಿಗಿಂತಲೂ ನೂರುಪಟ್ಟು ಸಮಸ್ಯೆಗಳಿವೆ. ಆದರೂ ಚಳವಳಿ ನಡೆಯುತ್ತಿಲ್ಲ. ಗುಲಾಮರಂತೆ ಜೀವಿಸುವ ಸ್ಥಿತಿಯಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲ. ವ್ಯವಸ್ಥೆಯನ್ನು ಪ್ರಶ್ನಿಸಿದರೆ ದೇಶದ್ರೋಹದ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ ಎಂದರು.
ಚಾಮರಾಜನಗರ ಅಮೃತಭೂಮಿ ಇಂಟರ್‌ನ್ಯಾಷನಲ್‌ ಸೆಂಟರ್‌ನ ನಿರ್ದೇಶಕಿ ಚುಕ್ಕಿ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.