ADVERTISEMENT

ಸಾಮಾಜಿಕ ಕಾರ್ಯಕರ್ತನಿಗೆ ಜೀವ ಬೆದರಿಕೆ: ಮುನಿರತ್ನ ವಿರುದ್ಧ ಆರೋಪ

ಜೆ.ಪಿ.ಪಾರ್ಕ್‌ನಲ್ಲಿ ಅನಧಿಕೃತ ಕಟ್ಟಡ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 2:04 IST
Last Updated 7 ಆಗಸ್ಟ್ 2021, 2:04 IST
ಮುನಿರತ್ನ
ಮುನಿರತ್ನ    

ಬೆಂಗಳೂರು: ‘ಜೆ.ಪಿ.ಪಾರ್ಕ್‌ ಆಟದ ಮೈದಾನದಲ್ಲಿ ಬಿಬಿಎಂಪಿ ಅನಧಿಕೃತ ಕಟ್ಟಡ ನಿರ್ಮಾಣ ಸಂಬಂಧ ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದ ಸಾಮಾಜಿಕ ಕಾರ್ಯಕರ್ತ ರೋಲ್ಯಾಂಡ್ ಸೋನ್ಸ್‌ ಅವರಿಗೆ ಸಚಿವ ಮುನಿರತ್ನ ಅವರಿಂದ ಜೀವಬೆದರಿಕೆ ಇದ್ದು,ರೋಲ್ಯಾಂಡ್ ಅವರಿಗೆ‍ಪೊಲೀಸ್ ಭದ್ರತೆ ಒದಗಿಸಬೇಕು’ ಎಂದುಜನಾಧಿಕಾರ ಸಂಘರ್ಷ ಪರಿಷತ್ ಆಗ್ರಹಿಸಿದೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್‌ನ ಸಹ ಅಧ್ಯಕ್ಷ ಪ್ರಕಾಶ್ ಬಾಬು, ‘ಬಿಬಿಎಂಪಿಯಿಂದಮೈದಾನದಲ್ಲಿ ಅನಧಿಕೃತ ಮಾರುಕಟ್ಟೆ ಕಟ್ಟಡ ನಿರ್ಮಾಣ ಆಕ್ಷೇಪಿಸಿ ರೋಲ್ಯಾಂಡ್ ಅವರು ಕೋರ್ಟ್‌ಗೆ ಪಿಐಎಲ್‌ ಸಲ್ಲಿಸಿದ್ದರು. ಅದರಂತೆ ಮೈದಾನದ ಜಂಟಿ ಅಳತೆ ಮಾಡಲು ಕೋರ್ಟ್‌ ಸೂಚಿಸಿತ್ತು. ಅರ್ಜಿದಾರರಿಗೆ ಜೀವ ಬೆದರಿಕೆ ಇದ್ದಿದ್ದರಿಂದ ಅಳತೆ ಸಮಯದಲ್ಲಿ ಯಶವಂತಪುರ ಇನ್‌ಸ್ಪೆಕ್ಟರ್ ಸುರೇಶ್ ಅವರಿಂದ ಭದ್ರತೆ ಕೇಳಿದ್ದರು. ಆದರೆ, ಪೊಲೀಸರು ಭದ್ರತೆ ಒದಗಿಸಲಿಲ್ಲ’ ಎಂದು ಆರೋಪಿಸಿದರು.

ಸಾಮಾಜಿಕ ಕಾರ್ಯಕರ್ತ ರೋಲ್ಯಾಂಡ್ ಸೋನ್ಸ್‌, ‘ಪೊಲೀಸರು ಭದ್ರತೆ ನೀಡದಿದ್ದರೂ ಸ್ನೇಹಿತರೊಂದಿಗೆ ಸ್ಥಳಕ್ಕೆ ಹೋಗಿದ್ದೆ. ಆಗ ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್ ಮೋಹನ್ ಅವರಿಗೆ ಮುನಿರತ್ನ ಕರೆ ಮಾಡಿ, ನನಗೆ ಪರೋಕ್ಷವಾಗಿ ಬೆದರಿಕೆ ಹಾಕಿದರು. ಮತ್ತೆ ನನ್ನ ಮೊಬೈಲ್‌ಗೆ ಕರೆ ಮಾಡಿ ಹಲವು ಬಾರಿ ಧಮ್ಕಿ ಹಾಕಿದ್ದಾರೆ’ ಎಂದು ವಿವರಿಸಿದರು.

ADVERTISEMENT

‘ಮನೆಯ ಹತ್ತಿರ ಇಬ್ಬರು ಅಪರಿಚಿತರು ಹೋಗಿ,ನನ್ನ ತಾಯಿಗೂ ಧಮ್ಕಿ ಹಾಕಿದ್ದರು. ಅವರನ್ನು ಹಿಡಿದು, ವಿಲ್ಸನ್ ಗಾರ್ಡನ್ ಠಾಣೆಗೆ ಒಪ್ಪಿಸಲಾಯಿತು. ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲಿಲ್ಲ. ಮನೆಯ ಬಳಿ ಸಿಕ್ಕ ಪೆನ್‌ವೊಂದರಲ್ಲಿ ಬ್ಲೇಡ್‌ ಪತ್ತೆಯಾಗಿದೆ. ನ್ಯಾಯದ ಪರ ಹೋರಾಟಕ್ಕೆ ನಿಂತಿರುವುದರಿಂದ ಈ ರೀತಿಯ ಅಪಾಯಗಳನ್ನು ಎದುರಿಸಬೇಕಾಗಿದೆ. ಮುನಿರತ್ನ ಜೊತೆಗೆ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹಾಗಾಗಿ, ನನಗೆ ಹಾಗೂ ಕುಟುಂಬಕ್ಕೆ ಭದ್ರತೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿದಸಚಿವ ಮುನಿರತ್ನ,‘ನನ್ನ ಮೇಲಿನ ಆರೋಪ ಸುಳ್ಳು. ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆರೋಪ ಮಾಡಿರುವವರ ಮುಖ ಪರಿಚಯವೂ ನನಗಿಲ್ಲ. ಇತ್ತೀಚಿಗೆ ಈ ರೀತಿ ಸುಳ್ಳು ಆರೋಪ ಮಾಡುವವರು ಹೆಚ್ಚಾಗುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.