ADVERTISEMENT

‘ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಅಗತ್ಯ’

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 20:24 IST
Last Updated 4 ಜುಲೈ 2019, 20:24 IST
ಗುರುರಾಜ ಕರಜಗಿ ಹಾಗೂ ಕೆ.ಆರ್‌.ವೇಣುಗೋಪಾಲ್ ಚರ್ಚಿಸಿದರು. ಎಸ್‌.ಸಿ.ಶರ್ಮಾ ಇದ್ದಾರೆ –ಪ್ರಜಾವಾಣಿ ಚಿತ್ರ
ಗುರುರಾಜ ಕರಜಗಿ ಹಾಗೂ ಕೆ.ಆರ್‌.ವೇಣುಗೋಪಾಲ್ ಚರ್ಚಿಸಿದರು. ಎಸ್‌.ಸಿ.ಶರ್ಮಾ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿಶ್ವವಿದ್ಯಾಲಯಗಳು ಕೇವಲ ಮಾಹಿತಿ ಕೇಂದ್ರಗಳಾಗಬಾರದು. ಬದಲಾಗಿ ಜ್ಞಾನ ಕೇಂದ್ರಗಳಾಗಿ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಹೆಚ್ಚು ಗಮನ ನೀಡಬೇಕು’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ಪ್ರಾಂಶುಪಾಲರಿಗೆ ಕಿವಿಮಾತು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ದಿಶಾ ಸಂಸ್ಥೆಯ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ‘ಪ್ರಾಂಶುಪಾಲರ ಸಮಾವೇಶ’ದಲ್ಲಿ ಮಾತನಾಡಿದರು.

‘ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪದವೀಧರರಾಗಿ ಹೊರಹೊಮ್ಮುತ್ತಾರೆ.‌ಆದರೆ, ಕೌಶಲದ ಕೊರತೆಯಿಂದ ಉದ್ಯೋಗ ಸಿಗದೆಹತಾಶರಾಗುತ್ತಾರೆ. ವಿದ್ಯಾರ್ಥಿಗಳಿಗೆ ಕಾಲೇಜು ಮಟ್ಟದಿಂದಲೇ ಕೌಶಲ ತರಬೇತಿ ನೀಡುವ ಅಗತ್ಯವಿದೆ. ಇದರ ಜೊತೆಗೆ ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯಗಳನ್ನು ದೃಢಪಡಿಸಲು ಮನೋವೈಜ್ಞಾನಿಕ ಸಲಹಾ ಕೇಂದ್ರಗಳನ್ನು ಸ್ಥಾಪಿಸಬೇಕು’ ಎಂದರು.

ADVERTISEMENT

ನ್ಯಾಕ್‌ ನಿರ್ದೇಶಕ ಎಸ್‌.ಸಿ.ಶರ್ಮಾ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಶೇ 100ರಷ್ಟು ವಿಷಯಾಧಾರಿತ ಶಿಕ್ಷಣ ದೊರೆಯಬೇಕು.ಆದರೆ,‍ಪ್ರಸ್ತುತಶಿಕ್ಷಣದಲ್ಲಿ ಶೇ 70ರಷ್ಟು ಯಂತ್ರಾಧಾರಿತ ಶಿಕ್ಷಣ ಹಾಗೂ ಶೇ 30ರಷ್ಟು ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ. ಕಂಪ್ಯೂಟರ್‌ ಸಿದ್ಧಪಡಿಸಿರುವ ವಿಷಯವನ್ನೇ ವಿದ್ಯಾರ್ಥಿಗಳು ಹೆಚ್ಚಾಗಿ ನಂಬುತ್ತಿದ್ದು, ಮಾನವಿಕ ಜ್ಞಾನ ಮರೆ
ಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನ್ಯಾಕ್‌ ಅಧಿಕಾರಿಗಳಿಗೆ ಕಾಲೇಜು ಮಂಡಳಿಗಳು ಪಂಚತಾರಾ ಹೋಟೆಲ್ ವ್ಯವಸ್ಥೆ ಮಾಡಿ ಉಡುಗೊರೆಗಳನ್ನು ನೀಡುವ ಪ್ರವೃತ್ತಿ ಹೇರಳವಾಗಿದೆ. ಇದುಬೌದ್ಧಿಕ ಅಪ್ರಾಮಾಣಿಕತೆಯನ್ನು ತೋರುತ್ತಿದ್ದು, ಇಂತಹ ವ್ಯವಸ್ಥೆಯಲ್ಲಿರುವುದಕ್ಕೆ ನಾಚಿಕೆ ಆಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪರಿಷ್ಕೃತ ಮಾನ್ಯತೆಯ ಚೌಕಟ್ಟನ್ನು ರೂಪಿಸಲಾಗಿದೆ’ ಎಂದರು.

ಶಿಕ್ಷಣತಜ್ಞ ಗುರುರಾಜ ಕರಜಗಿ, ‘ವಿದ್ಯಾರ್ಥಿಗಳಿಗೆ ಶಿಕ್ಷಕರು ಮಾಹಿತಿಯ ಕಣಜದಂತೆ ಇರಬೇಕು. ಅವರಿಗೆ ಅಗತ್ಯವಾದ ಸಲಹೆ, ಸೂಚನೆಗಳನ್ನು ನೀಡಿ ಸೂಕ್ತ ಮಾರ್ಗ ತೋರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.