ಬೆಂಗಳೂರು: ‘ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕದಲ್ಲಿ(ಡಬ್ಲ್ಯುಟಿಇ) ಸ್ವಚ್ಛತೆ ಜತೆಗೆ ನಿರ್ವಹಣೆಗೂ ಆದ್ಯತೆ ನೀಡಬೇಕಿದೆ. ಈ ಕುರಿತು ಬಿಬಿಎಂಪಿ ಹಾಗೂ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಮಂಗಳವಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ‘ಘಟಕಕ್ಕೆ ನಗರದ ವಿವಿಧ ಭಾಗಗಳಿಂದ ಲಾರಿಗಳಲ್ಲಿ ತ್ಯಾಜ್ಯ ತರಲಾಗುತ್ತದೆ. ಲಾರಿಗಳು ಇಲ್ಲಿ ತ್ಯಾಜ್ಯ ಸುರಿದು ವಾಪಸಾಗುವಾಗ ದುರ್ವಾಸನೆ ಬರುತ್ತದೆ ಎಂಬ ದೂರುಗಳಿವೆ. ಹೀಗಾಗಿ ತ್ಯಾಜ್ಯ ಖಾಲಿ ಮಾಡಿದ ಲಾರಿಗಳು ವಾಪಸ್ ಹೋಗುವ ಮುನ್ನ ಸ್ವಚ್ಛಗೊಳಿಸಲು ಆವರಣದಲ್ಲಿಯೇ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
‘ಘಟಕದಿಂದ ದುರ್ವಾಸನೆ ಬಂದು ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತಿ ನಿತ್ಯ ವಾಸನೆ ನಿಯಂತ್ರಣ ರಾಸಾಯನಿಕ ಬಳಸಬೇಕು‘ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ವಿದ್ಯುತ್ ಉತ್ಪಾದನಾ ಘಟಕಕ್ಕೆ ಬರುವ ತ್ಯಾಜ್ಯದಲ್ಲಿ ಕೆಲವೊಂದು ಸಮಸ್ಯೆಗಳಿವೆ. ಅದೇ ರೀತಿ ಖಾಸಗಿಯವರು ಘಟಕ ನಿರ್ವಹಿಸುವ ವಿಚಾರದಲ್ಲೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಜತೆಗೆ ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಬೇಕಾಗಿದೆ’ ಎಂದು ಹೇಳಿದರು.
ಶೀಘ್ರ ಪರಿಹಾರ ವಿತರಣೆ:
ವಿದ್ಯುತ್ ಉತ್ಪಾದನಾ ಘಟಕದಲ್ಲಿ ಇತ್ತೀಚೆಗೆ ದುರಂತ ಸಂಭವಿಸಿ 5 ಮಂದಿ ಮೃತಪಟ್ಟಿದ್ದು, ಅವರ ಕುಟುಂಬದವರಿಗೆ ಕೆಪಿಸಿಎಲ್ ವತಿಯಿಂದ ತಲಾ ₹5 ಲಕ್ಷ ಪರಿಹಾರವನ್ನು ಶೀಘ್ರವೇ ವಿತರಿಸಲಾಗುವುದು. ಜತೆಗೆ ಘಟಕ ನಿರ್ವಹಿಸುವ ಕಂಪನಿಯಿಂದಲೂ ಸೂಕ್ತ ಪರಿಹಾರ ಒದಗಿಸಲಾಗುವುದು’ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.