ADVERTISEMENT

ಮನೆಯತ್ತ ಹೆಜ್ಜೆ ಹಾಕಿದ ಕೈದಿಗಳು: ಪರಪ್ಪನ ಅಗ್ರಹಾರದ 81 ಕೈದಿಗಳು ಬಂಧಮುಕ್ತ

​ಪ್ರಜಾವಾಣಿ ವಾರ್ತೆ
Published 23 ಮೇ 2023, 16:35 IST
Last Updated 23 ಮೇ 2023, 16:35 IST
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಸನ್ನಡತೆ ಮೇಲೆ ಬಿಡುಗಡೆಯಾದ ಕೈದಿಗಳು ತಮ್ಮ ಆಪ್ತರೊಂದಿಗೆ ಸಂಭ್ರಮ ಹಂಚಿಕೊಂಡರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಸನ್ನಡತೆ ಮೇಲೆ ಬಿಡುಗಡೆಯಾದ ಕೈದಿಗಳು ತಮ್ಮ ಆಪ್ತರೊಂದಿಗೆ ಸಂಭ್ರಮ ಹಂಚಿಕೊಂಡರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಜೀವಾವಧಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರದ ಕಾರಾಗೃಹ ಸೇರಿದ್ದ 81 ಕೈದಿಗಳಿಗೆ ಮಂಗಳವಾರ ಬಿಡುಗಡೆಯ ಭಾಗ್ಯ ಸಿಕ್ಕಿತು.

ಸನ್ನಡತೆ ಆಧಾರದಲ್ಲಿ ರಾಜ್ಯದ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 214 ಕೈದಿಗಳ ಬಿಡುಗಡೆಗೆ ರಾಜ್ಯ ಸರ್ಕಾರವು ಆದೇಶಿಸಿತ್ತು. ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನಿಂದಲೂ ಕೈದಿಗಳು ಬಂಧಮುಕ್ತರಾದರು.

ಪರಪ್ಪನ ಅಗ್ರಹಾರದಲ್ಲಿದ್ದ ಇಬ್ಬರು ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 79 ಮಂದಿಗೆ ಬಿಡುಗಡೆ ಮಾಡಲಾಯಿತು. ಅನಾರೋಗ್ಯದ ಚಿಕಿತ್ಸೆಗೆಂದು ಮೈಸೂರು ಹಾಗೂ ವಿಜಯಪುರದ ತಲಾ ಒಬ್ಬರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆ ತರಲಾಗಿತ್ತು. ಅವರಿಬ್ಬರೂ ಸೇರಿ ಒಟ್ಟು 81 ಕೈದಿಗಳನ್ನು ಬಿಡುಗಡೆ ಮಾಡಲಾಯಿತು.

ADVERTISEMENT

ಕೆಲವರನ್ನು ಕರೆದೊಯ್ಯಲು ಕುಟುಂಬಸ್ಥರು ಜೈಲಿನ ಬಳಿಗೆ ಬಂದಿದ್ದರು. ಗೇಟು ದಾಟಿ ಬರುತ್ತಿದ್ದಂತೆಯೇ ಸಂಬಂಧಿಕರು ತಬ್ಬಿಕೊಂಡು ಕಣ್ಣೀರು ಹಾಕಿದರು. ಸಂಭ್ರಮದಿಂದ ಸ್ವಾಗತಿಸಿ ಮನೆಗೆ ಕರೆದೊಯ್ದರು. ಇನ್ನು ಕೆಲವರು ತಾವೇ ಮನೆಯತ್ತ ಹೆಜ್ಜೆ ಹಾಕಿದರು. ತಮ್ಮ ಬಟ್ಟೆಯ ಬ್ಯಾಗ್‌ನೊಂದಿಗೆ ಹೊರಗೆ ಬಂದರು.

‘ಎಲ್ಲರಿಗೂ ಬಿಡುಗಡೆಯ ಪ್ರಮಾಣ ಪತ್ರ ನೀಡಿ ಕಳುಹಿಸಲಾಯಿತು. ಇನ್ಮುಂದೆ ಈ ರೀತಿಯ ಪ್ರಮಾದ ಎಸಗುವುದಿಲ್ಲ ಎಂಬುದಾಗಿ ಸಹಿ ಹಾಕಿಸಿಕೊಂಡು ಕಳುಹಿಸಲಾಯಿತು. ಅವರಿಗೆ ಹೂವು ನೀಡಿ ಬೀಳ್ಕೊಡಲಾಯಿತು. ಅವಧಿ ಪೂರ್ವ ಬಿಡುಗಡೆಯಾದ ಎಲ್ಲರೂ ರಾಜ್ಯದ ಕೈದಿಗಳು. ಜೈಲಿನಲ್ಲಿ ಉತ್ತಮ ನಡತೆ ತೋರಿದ್ದ ಅರ್ಹ ಕೈದಿಗಳ ಬಿಡುಗಡೆಗೆ ಕಾರಾಗೃಹಗಳ ಸ್ಥಾಯಿ ಸಲಹಾ ಮಂಡಳಿಗಳ ವರದಿ ಸಮೇತ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿತ್ತು. ಈ ಹಿಂದೆಯೇ ಬಿಡುಗಡೆ ಆಗಬೇಕಿತ್ತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ವಿಳಂಬವಾಗಿತ್ತು’ ಎಂದು ಸಿಬ್ಬಂದಿ ಹೇಳಿದರು.

‘ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದೆ. ಇನ್ನು ಆ ರೀತಿಯ ಕೃತ್ಯ ಎಸಗುವುದಿಲ್ಲ. ಕೆಟ್ಟವರ ಜೊತೆಗೂ ಸೇರುವುದಿಲ್ಲ‘ ಎಂದು ಹೇಳಿದ ಬಿಡುಗಡೆಯಾದವರು, ಖುಷಿಯಿಂದ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.