ಬೆಂಗಳೂರು: ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್‌ನ (ಫನಾ) ನೂತನ ಅಧ್ಯಕ್ಷರಾಗಿ ಡಾ. ಶೋಭಾ ಪ್ರಕಾಶ್ ಆಯ್ಕೆಯಾಗಿದ್ದಾರೆ.
ಅಸೋಸಿಯೇಷನ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 4ನೇ ರಾಷ್ಟ್ರೀಯ ಆರೋಗ್ಯ ಶೃಂಗದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನಿಯೋಜಿತ ಅಧ್ಯಕ್ಷರಾಗಿ (ಚುನಾಯಿತ) ಡಾ. ರಮೇಶ್ ಸೋಮಯಾಜಿ, ಉಪಾಧ್ಯಕ್ಷರಾಗಿ ಡಾ.ಎಂ.ಎಲ್. ಗಿರಿಧರ್, ಕಾರ್ಯದರ್ಶಿಯಾಗಿ ಡಾ. ಸಂತೋಷ್ ಸಕ್ಲೇಚಾ, ಜಂಟಿ ಕಾರ್ಯದರ್ಶಿಯಾಗಿ ಡಾ. ರಾಜೇಶ್ ಮೂರ್ತಿ, ಖಜಾಂಚಿಯಾಗಿ ಡಾ. ಶ್ರೀಹರಿ ಎಂ. ಹಾಗೂ ವೈಜ್ಞಾನಿಕ ಉಪಸಮಿತಿ ಅಧ್ಯಕ್ಷೆಯಾಗಿ ಡಾ.ಜಿ.ವಿ. ದಿವಾಕರ್ ಆಯ್ಕೆಯಾಗಿದ್ದಾರೆ. ಈ ಕಾರ್ಯಕಾರಿ ಸಮಿತಿಯ ಅಧಿಕಾರವಧಿ ಎರಡು ವರ್ಷಗಳಾಗಿದ್ದು, 2027ರವರೆಗೆ ಕಾರ್ಯನಿರ್ವಹಿಸಲಿದೆ.
ಡಾ. ಶೋಭಾ ಪ್ರಕಾಶ್ ಅವರು ಫನಾದ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದಾರೆ. ಸ್ತ್ರೀರೋಗ ತಜ್ಞರಾಗಿರುವ ಅವರು, ಯಲಹಂಕದ ನೇಹಾ ಪ್ರಕಾಶ್ ಆಸ್ಪತ್ರೆಯ ಮುಖ್ಯಸ್ಥರಾಗಿದ್ದಾರೆ. ಅವರಿಗೆ ಹಾಲಿ ಅಧ್ಯಕ್ಷ ಡಾ. ಗೋವಿಂದಯ್ಯ ಯತೀಶ್ ಅಧಿಕಾರ ಹಸ್ತಾಂತರಿಸಿದರು.
ಇದೇ ವೇಳೆ ಮಾತನಾಡಿದ ಡಾ. ಶೋಭಾ ಪ್ರಕಾಶ್, ‘ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಸುರಕ್ಷಿತ ವಾತಾವರಣ ನಿರ್ಮಾಣಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು. ಹೊಸ ತಂತ್ರಜ್ಞಾನಗಳನ್ನು ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಮೂಲಕ, ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆಗೆ ಆದ್ಯತೆ ನೀಡಲಾಗುವುದು. ಆರೋಗ್ಯ ಸಂಸ್ಥೆಗಳನ್ನು ಒಟ್ಟಾಗಿ ಕರೆದೊಯ್ದು, ಪರವಾನಗಿ ನವೀಕರಣ ಸೇರಿ ವಿವಿಧ ಸಮಸ್ಯೆಗಳನ್ನು ನಿವಾರಿಸಲಾಗುವುದು’ ಎಂದರು.
ವೈದ್ಯಕೀಯ ಕ್ಷೇತ್ರದ ಸಾಧನೆಗೆ ಅಪೊಲೊ ಆಸ್ಪತ್ರೆ ಸಂಸ್ಥಾಪನಾಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ, ಫನಾದ ಮಾಜಿ ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ., ಟ್ರಿನಿಟಿ ಹಾರ್ಟ್ ಸೆಂಟರ್‌ನ ಡಾ.ಬಿ.ಎಂ. ಮುರಳೀಧರ, ವಿಜಯನಗರ ಆಸ್ಪತ್ರೆಯ ಡಾ.ವಿ.ಎಸ್. ರಾಜು, ಸಂತೋಷ್ ಆಸ್ಪತ್ರೆಯ ಡಾ.ಬಿಕಮ್‌ಚಂದ್ ಸಕ್ಲೇಚ ಹಾಗೂ ಮಂಗಳೂರಿನ ಎಜೆ ಆಸ್ಪತ್ರೆಯ ಡಾ. ಪ್ರಶಾಂತ್ ಮರ್ಲ ಅವರನ್ನು ಶೃಂಗದಲ್ಲಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.