ADVERTISEMENT

ಶುಲ್ಕ ಕಡಿತ: ಖಾಸಗಿ ಶಾಲೆಗಳಿಂದ ಬೃಹತ್ ರ‍್ಯಾಲಿ

10 ಸಾವಿರ ಖಾಸಗಿ ಶಾಲೆಗಳು ಸಂಪೂರ್ಣ ಬಂದ್ ?

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 22:12 IST
Last Updated 22 ಫೆಬ್ರುವರಿ 2021, 22:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಖಾಸಗಿ ಶಾಲಾ ಶುಲ್ಕ ಕಡಿತ ಆದೇಶ ಪರಿಷ್ಕರಿಸಲು ಸರ್ಕಾರವನ್ನು ಆಗ್ರಹಿಸಿ ಪ್ರಮುಖ 11 ಖಾಸಗಿ ಶಾಲಾ ಸಂಘಟನೆಗಳು ಮಂಗಳವಾರ (ಫೆ.23) ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಿದ್ದು, ಈ ಸಂಘಟನೆಗಳಡಿ ಬರುವ ಸುಮಾರು 10 ಸಾವಿರ ಖಾಸಗಿ ಶಾಲೆಗಳು ಸಂಪೂರ್ಣ ಬಂದ್ ಆಗಲಿವೆ.

ಖಾಸಗಿ ಶಾಲೆಗಳ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸುವುದರಿಂದ ಶಾಲೆಗಳಲ್ಲಿ ಯಾವುದೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳಾಗಲಿ, ಆನ್‌ಲೈನ್ ತರಗತಿಗಳಾಗಲಿ ನಡೆಯುವುದಿಲ್ಲ ಎಂದು ಶಾಲೆಗಳು ಪೋಷಕರಿಗೆ ಸಂದೇಶ ರವಾನಿಸಿವೆ.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಿಗ್ಗೆ 10ಕ್ಕೆ ಸ್ವಾತಂತ್ರ್ಯ ಉದ್ಯಾನದವರೆಗೆ ರ‍್ಯಾಲಿ ಸಾಗಲಿದ್ದು, ಬೃಹತ್‌ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿದೆ. ಸುಮಾರು 30 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್), ಮ್ಯಾನೇಜ್‌ಮೆಂಟ್ಸ್ ಆಫ್ ಇಂಡಿಪೆಂಡೆಂಟ್ ಸಿಬಿಎಸ್‌ಇ ಸ್ಕೂಲ್ಸ್ ಅಸೋಸಿಯೇಷನ್(ಮಿಸ್ಕಾ), ಕರ್ನಾಟಕ ರಾಜ್ಯ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ಕುಸ್ಮಾ), ಕರ್ನಾಟಕ ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆಗಳ ಸಂಘ ಸೇರಿದಂತೆ 11 ಸಂಘಟನೆಗಳ ಸಾವಿರಾರು ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಭಾಗವಹಿಸಲಿದ್ದಾರೆ.

‘ಕೋವಿಡ್‌ನಿಂದ ಖಾಸಗಿ ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಆರ್ಥಿಕ ಪ್ಯಾಕೇಜ್ ಕೂಡ ಘೋಷಿಸಿಲ್ಲ. ಈಗ ಶೇ 30ರಷ್ಟು ಬೋಧನಾ ಶುಲ್ಕ ಕಡಿತ ಮಾಡಿದ್ದಾರೆ. ಆದರೆ, ನೈಜವಾಗಿ ಶೇ 60ರಷ್ಟು ನಷ್ಟ ಶಾಲೆಗಳಿಗೆ ಆಗುತ್ತಿದೆ. ಈಗ ಪ್ರತಿಭಟನೆಯೊಂದೇ ನಮಗೆ ಉಳಿದಿರುವ ದಾರಿ’ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿಯ ಸಂಚಾಲಕ ಡಿ. ಶಶಿಕುಮಾರ್ ಹೇಳಿದರು.

ಕೋವಿಡ್ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪೋಷಕರಿಗೆ ನೆರವಾಗಲು ಸರ್ಕಾರ ಖಾಸಗಿ ಶಾಲೆಗಳಲ್ಲಿ ಶೇ 30ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿತ್ತು. ಶೇ 70ರಷ್ಟು ಬೋಧನಾ ಶುಲ್ಕ ಹೊರತುಪಡಿಸಿ ಇನ್ಯಾವುದೇ ಶುಲ್ಕವನ್ನು ಪೋಷಕರಿಂದ ಈ ಸಲ ಸಂಗ್ರಹಿಸಬಾರದೆಂದು ಆದೇಶ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.