ಬೆಂಗಳೂರು: ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲುಗಡೆಗೆ ನಿಗದಿ ಪಡಿಸಿರುವ ಸ್ಥಳಗಳಲ್ಲಿ ಖಾಸಗಿ ಬಸ್, ಕ್ಯಾಬ್, ಆಟೊ ನಿಲುಗಡೆ ಮಾಡುವುದು ನಗರದ ಹಲವು ಕಡೆ ಮುಂದುವರಿದಿದೆ. ಇದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ನಿಲ್ಲಿಸುವುದಕ್ಕೂ ಸ್ಥಳಾವಕಾಶ ಇಲ್ಲವಾಗಿದೆ. ಸಾರಿಗೆ ಸಂಸ್ಥೆಯ ಬಸ್ ಹತ್ತುವುದಕ್ಕೂ ಪ್ರಯಾಣಿಕರು ಪಡಿಪಾಟಲು ಪಡುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿದ್ದ ಖಾಸಗಿ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಸಂಚಾರ ಪೊಲೀಸರು, ಕಳೆದ ನಾಲ್ಕು ವರ್ಷಗಳಲ್ಲಿ 24,123 ಪ್ರಕರಣ ದಾಖಲಿಸಿಕೊಂಡು, ಖಾಸಗಿ ವಾಹನಗಳ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ. ಆದರೂ, ಸಮಸ್ಯೆ ಬಗೆಹರಿದಂತೆ ಕಾಣಿಸುತ್ತಿಲ್ಲ.
ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯಲ್ಲಿರುವ ಬಸ್ ನಿಲ್ದಾಣ, ಯಶವಂತಪುರದ ಗೋವರ್ಧನ್ ಚಿತ್ರಮಂದಿರದ ಬಳಿ, ಗೊರಗುಂಟೆಪಾಳ್ಯ ಜಂಕ್ಷನ್ ಹಾಗೂ ಕೆಎಲ್‌ಇ ದಂತ ವೈದ್ಯಕೀಯ ಕಾಲೇಜು, ಜಾಲಹಳ್ಳಿ ಜಂಕ್ಷನ್, ಎಂಟನೇ ಮೈಲಿ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ದೀಪಾಂಜಲಿನಗರ, ಕೆಂಗೇರಿ, ಶಿರ್ಕೆ ವೃತ್ತ, ಬಿಬಿಎಂಪಿ ಪ್ರಧಾನ ಕಚೇರಿ ಜಂಕ್ಷನ್, ಮೆಜೆಸ್ಟಿಕ್ ಸುತ್ತಮುತ್ತಲ ರಸ್ತೆಗಳು, ಹೆಬ್ಬಾಳ ರಸ್ತೆಯ ಎಸ್ಟೀಮ್ ಮಾಲ್, ಯಲಹಂಕ ಉಪ ನಗರ... ಹೀಗೆ ನಗರದ ಹಲವು ಕಡೆಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣಗಳ ಬಳಿ, ಖಾಸಗಿ ವಾಹನಗಳೇ ಪ್ರತಿನಿತ್ಯ ಕಾಣಿಸುತ್ತಿವೆ.
ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಪ್ರಯಾಣಿಕರು ಹತ್ತುವಾಗ, ಇಳಿಯುವಾಗ ಆಟೊಗಳು, ಕ್ಯಾಬ್ ಸೇರಿ ಖಾಸಗಿ ವಾಹನಗಳು ಅಡ್ಡ ಬರುತ್ತಿವೆ. ಬಸ್ ಹತ್ತುವ ಆತುರದಲ್ಲಿರುವ ವಯಸ್ಕರು, ಮಹಿಳೆಯರು ಹಾಗೂ ಮಕ್ಕಳಿಗೆ ಖಾಸಗಿ ವಾಹನಗಳು ಡಿಕ್ಕಿ ಹೊಡೆಯುತ್ತಿರುವ ಪರಿಣಾಮ ಅವರು ಗಾಯಗೊಂಡು ಆಸ್ಪತ್ರೆ ಸೇರುತ್ತಿದ್ದಾರೆ.
ವಾರಾಂತ್ಯದ ವೇಳೆ ಸಮಸ್ಯೆ ತೀವ್ರ: ವಾರಾಂತ್ಯ, ಸಾಲು ಸಾಲು ರಜಾ ದಿನಗಳು ಹಾಗೂ ಹಬ್ಬಗಳ ಸಂದರ್ಭದಲ್ಲಿ ಊರು, ಪ್ರವಾಸಕ್ಕೆಂದು ಪ್ರಯಾಣಿಕರು ಖಾಸಗಿ ಬಸ್ ಹಾಗೂ ಕ್ಯಾಬ್‌ಗಳನ್ನು ಬುಕ್ ಮಾಡಿಕೊಂಡಿರುತ್ತಾರೆ. ನಿಗದಿತ ಸಮಯಕ್ಕೂ ಮೊದಲೇ ಖಾಸಗಿ ಬಸ್‌ಗಳು ರಸ್ತೆಬದಿಗೆ ಬಂದು ನಿಲುಗಡೆ ಆಗಿರುತ್ತವೆ. ಇದರಿಂದ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಹಾಗೂ ಸಾರ್ವಜನಿಕರ ಇತರೆ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆಯ ಬದಿಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಖಾಸಗಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವ ಕಾರಣ ಹಿಂಬದಿಯ ವಾಹನಗಳು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಗೋವರ್ಧನ ಚಿತ್ರಮಂದಿರದ ಎದುರು ಸಮಸ್ಯೆ ತೀವ್ರವಾಗಿದೆ ಎಂದು ಸ್ಥಳೀಯರು ಹೇಳಿದರು.
ಊರಿಗೆ ಹೋಗಲೆಂದು ಗೋವರ್ಧನ ಚಿತ್ರಮಂದಿರದ ಬಳಿಗೆ ಸಾವಿರಾರು ಪ್ರಯಾಣಿಕರು ಬರುತ್ತಾರೆ. ಮಳೆ ಬಂದರೆ ಈ ಸ್ಥಳದಲ್ಲಿ ಪ್ರಯಾಣಿಕರು ನಿಲುವುದಕ್ಕೂ ಸೂಕ್ತ ಸ್ಥಳ ಇಲ್ಲ. ಮಳೆಯಲ್ಲೇ ತೊಯ್ಯುವ ಪರಿಸ್ಥಿತಿಯಿದೆ ಎಂದು ಹಲವರು ನೋವು ತೋಡಿಕೊಂಡಿದ್ದಾರೆ. ಇನ್ನು ರಸ್ತೆಯಲ್ಲಿ ವಾಹನ ನಿಲುಗಡೆಯ ವಿಚಾರಕ್ಕೆ ಗಲಾಟೆಗಳು ನಡೆದು ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿವೆ.
‘ಬಿಎಂಟಿಸಿ ಬಸ್‌ಗಳು, ಬಿಬಿಎಂಪಿ ವ್ಯಾಪ್ತಿಯ 25 ಕಿ.ಮೀ ವರೆಗೆ ಕಾರ್ಯಾಚರಣೆ ನಡೆಸುತ್ತಿವೆ. ಬೆಂಗಳೂರು ನಗರ ಹಾಗೂ ಹೊರವಲಯದ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್ ನಿಲುಗಡೆ ಮಾಡಲಾಗುತ್ತಿದೆ. ಬಸ್ ನಿಲ್ದಾಣಗಳ ಬಳಿ, ಖಾಸಗಿ ವಾಹನಗಳನ್ನು ನಿಲ್ಲಿಸುತ್ತಿರುವುದು ಕಂಡುಬಂದರೆ ಸಾರಿಗೆ ಸಂಸ್ಥೆಯ ‘ಸಾರಥಿ ಗಸ್ತು ಪಡೆ’ಯ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಅವುಗಳನ್ನು ತೆರವು ಮಾಡುತ್ತಿದ್ದಾರೆ. ಜತೆಗೆ, ಖಾಸಗಿ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆಯನ್ನೂ ನಡೆಸಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಸಾರಿಗೆ ಸಂಸ್ಥೆಯ ಬಸ್‌ಗಳು ನಿಲುಗಡೆ ಆಗುವ ಸ್ಥಳಗಳಲ್ಲಿ ಖಾಸಗಿ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘನೆ ಕಂಡುಬಂದರೆ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ–ಎಂ.ಎನ್.ಅನುಚೇತ್, ಜಂಟಿ ಪೊಲೀಸ್ ಕಮಿಷನರ್ ಸಂಚಾರ ವಿಭಾಗ
11924 ಚಾಲಕರಿಗೆ ತರಬೇತಿ
ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಬಿಎಂಟಿಸಿ ಬಸ್ ಚಾಲಕರಿಗೆ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಅನುಸರಿಬೇಕಾದ ಕ್ರಮಗಳ ಕುರಿತು ತರಬೇತಿ ನೀಡಲಾಗುತ್ತಿದೆ. ಸಂಚಾರ ದಟ್ಟಣೆ ಆಗದಂತೆ ಕ್ರಮ ವಹಿಸುವುದು ಅಪಘಾತವಾಗದ ರೀತಿಯಲ್ಲಿ ವಾಹನ ಚಾಲನೆ ಪ್ರಯಾಣಿಕರು ಹಾಗೂ ಎದುರು ವಾಹನಗಳ ಚಾಲಕರ ಜತೆಗೆ ಸಂಯಮದಿಂದ ವರ್ತನೆ ಮಾಡಬೇಕು ಎಂದು ಚಾಲಕರಿಗೆ ತರಬೇತಿಯಲ್ಲಿ ತಿಳಿಸಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ 11924 ಮಂದಿಗೆ ತರಬೇತಿ ನೀಡಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು.
ಸುಗಮ ಸಂಚಾರಕ್ಕೆ ವ್ಯವಸ್ಥೆ
* ಸಾರಿಗೆ ಸಂಸ್ಥೆಯ ಬಸ್ ನಿಲುಗಡೆ ಸ್ಥಳಗಳಲ್ಲಿ ಖಾಸಗಿ ವಾಹನಗಳು ನಿಲುಗಡೆ ಮಾಡುವುದನ್ನು ತಡೆಗಟ್ಟಲು ‘ಕೋಬ್ರಾ ಸಿಬ್ಬಂದಿ’ ನಿಯೋಜನೆ
* ನಿಗದಿತ ಸ್ಥಳಗಳಲ್ಲಿಯೇ ಬಿಎಂಟಿಸಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ‘ಸಾರಥಿ ಗಸ್ತು ಪಡೆ’ ನೇಮಕ
* ಅಗತ್ಯವಿರುವ ಮತ್ತಷ್ಟು ಸ್ಥಳಗಳಲ್ಲಿ ಬಸ್ ಬೇ ನಿರ್ಮಾಣಕ್ಕೆ ಅನುಮತಿ
* ಸಾರ್ವತ್ರಿಕ ರಜಾ ದಿನಗಳು ಹಬ್ಬಗಳ ಸಂದರ್ಭ ಹಾಗೂ ಇತರೆ ವಿಶೇಷ ದಿನಗಳಲ್ಲಿ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಅಧಿಕಾರಿ ಸಿಬ್ಬಂದಿ ನಿಯೋಜಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.