ADVERTISEMENT

ಪತ್ನಿ ಜೊತೆಗಿನ ಖಾಸಗಿ ಕ್ಷಣದ ದೃಶ್ಯ ಸೆರೆ ಹಿಡಿದು ಆಪ್ತರಿಗೆ ಕಳುಹಿಸಿದ ಪತಿ: FIR

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 14:58 IST
Last Updated 3 ಅಕ್ಟೋಬರ್ 2025, 14:58 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಪತ್ನಿಯೊಂದಿಗೆ ಕಳೆದ ಖಾಸಗಿ ಕ್ಷಣಗಳ ದೃಶ್ಯವನ್ನು ಮೊಬೈಲ್‌ ಹಾಗೂ ಕ್ಯಾಮೆರಾದಲ್ಲಿ ಸೆರೆ ಹಿಡಿದು ವಿದೇಶದಲ್ಲಿರುವ ತನ್ನ ಆಪ್ತರಿಗೆ ಕಳುಹಿಸಿದ್ದ ಆರೋಪದ ಅಡಿ ಪತಿ ಸೇರಿದಂತೆ ನಾಲ್ವರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಠಾಣಾ ವ್ಯಾಪ್ತಿಯ ಬಡಾವಣೆಯೊಂದರಲ್ಲಿ ನೆಲಸಿರುವ 35 ವರ್ಷದ ಮಹಿಳೆ ನೀಡಿರುವ ದೂರು ಆಧರಿಸಿ, ಅವರ ಪತಿ ಸೈಯದ್ ಇನಾಮುಲ್‌ ಹಕ್‌ ಹಾಗೂ ಅಮೀನ್‌ ಬೇಗ್‌, ಸೈಯದ್ ವಸೀಂ ಬೋಕರಿ, ಹೀನಾ ಕೌಸರ್‌ ಎಂಬುವವರ ವಿರುದ್ಧ ವರದಕ್ಷಿಣೆ ನಿಷೇಧ ಕಾಯ್ದೆ ಸೆಕ್ಷನ್‌ 3, 4 ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 351,(2), 85, 318, 77 ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

‘ಸೈಯದ್ ಇನಾಮುಲ್‌ ಹಕ್ ಅವರ ಜತೆಗೆ ಕಳೆದ ಡಿಸೆಂಬರ್‌ 15ರಂದು ಮಹಿಳೆಯ ವಿವಾಹ ನಡೆದಿತ್ತು. ವಿವಾಹದ ಸಂದರ್ಭದಲ್ಲಿ ಆರೋಪಿಗೆ ಒಂದು ಬೈಕ್‌, 340 ಗ್ರಾಂ ಚಿನ್ನಾಭರಣ ನೀಡಿ ಮಹಿಳೆಯ ಪೋಷಕರು ಮದುವೆ ಮಾಡಿಕೊಟ್ಟಿದ್ದರು. ಮದುವೆಯ ಸಂದರ್ಭದಲ್ಲಿ ಆರೋಪಿಯ ದೊಡ್ಡ ತಂಗಿಯ ಪತಿ ಅಮೀನ್‌ ಬೇಗ್ ಅವರು ಊಟದ ವಿಚಾರಕ್ಕೆ ಗಲಾಟೆ ಮಾಡಿದ್ದರು. ಮದುವೆಗೆ ಬಂದಿದ್ದ ಜನರ ಎದುರೇ ಗಲಾಟೆ ಮಾಡಿ ಅವಮಾನ ಮಾಡಿದ್ದರು. ಮದುವೆಯಾಗಿ ಕೆಲವು ದಿನಗಳು ಕಳೆದ ಬಳಿಕ ನನಗೆ ಈಗಾಗಲೇ ಮದುವೆಯಾಗಿದೆ. ನೀನು ಎರಡನೇ ಹೆಂಡತಿ ಎಂಬುದಾಗಿ ಸೈಯದ್‌ ಇನಾಮುಲ್ ಹಕ್‌ ಹೇಳಿದ್ದರು’ ಎಂದು ಆರೋಪಿಸಿ ಮಹಿಳೆ ನೀಡಿರುವ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ದೂರುದಾರರ ಸಮ್ಮತಿಯಿಲ್ಲದೇ ಖಾಸಗಿ ಫೋಟೊ ಹಾಗೂ ವಿಡಿಯೊ ತೆಗೆದು ಅವುಗಳನ್ನು ವಿದೇಶದಲ್ಲಿರುವ ಸ್ನೇಹಿತರಿಗೆ ಸೈಯದ್‌ ಇನಾಮುಲ್‌ ಹಕ್‌ ಕಳುಹಿಸಿದ್ದರು. ವಿದೇಶದಲ್ಲಿರುವ ಸ್ನೇಹಿತರ ಜತೆಗೆ ದೈಹಿಕ ಸಂಬಂಧ ಹೊಂದುವಂತೆಯೂ ಒತ್ತಾಯಿಸಿದ್ದರು. ಅಲ್ಲದೇ ಖಾಸಗಿ ಕ್ಷಣಗಳಿರುವ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿಯೂ ಬೆದರಿಕೆ ಹಾಕಿದ್ದರು’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಮನೆ ಹಾಗೂ ಹೋಟೆಲ್‌ಗೆ ಕರೆದೊಯ್ದು ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗಿದೆ. ಹಲ್ಲೆ ನಡೆಸಲಾಗಿದೆ. ವಿಚ್ಛೇದನ ನೀಡುವುದಾಗಿ ಪದೇ ಪದೇ ಬೆದರಿಕೆ ಹಾಕಿದ್ದರು. ತಂದೆ–ತಾಯಿ ನೋಡುವುದಕ್ಕೂ ಬಿಟ್ಟಿರಲಿಲ್ಲ’ ಎಂದು ಮಹಿಳೆ ಆರೋಪಿಸಿದ್ದಾರೆ.

‘ಮಲಗುವ ಕೋಣೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಖಾಸಗಿ ಕ್ಷಣದ ದೃಶ್ಯವನ್ನು ಸೆರೆಹಿಡಿದು ಇಟ್ಟುಕೊಂಡಿದ್ದಾರೆ’ ಎಂದು ಪತಿ ವಿರುದ್ಧ ಪತ್ನಿ ದೂರು ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.