ADVERTISEMENT

ಪ್ರಿಯಾ ಮುಖರ್ಜಿ ಅರ್ಜಿ: ಆದೇಶ ಕಾಯ್ದಿರಿಸಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 21:00 IST
Last Updated 24 ನವೆಂಬರ್ 2020, 21:00 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಟಿಆರ್‌ಪಿ ಹಗರಣದಲ್ಲಿ ಬಂಧನ ಭೀತಿಯಲ್ಲಿರುವ ರಿಪಬ್ಲಿಕ್ ಟಿವಿ ವಾಹಿನಿ ಒಡೆತನದ ಎಆರ್‌ಜಿ ಔಟ್‌ಲೈರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಪ್ರಿಯಾ ಮುಖರ್ಜಿ ಸಲ್ಲಿಸಿರುವ ಅರ್ಜಿ ಸಂಬಂಧ ಆದೇಶವನ್ನು ಹೈಕೋರ್ಟ್ ಕಾಯ್ದಿರಿಸಿದೆ.

ಅನಾರೋಗ್ಯ ಪೀಡಿತ ತಂದೆಯನ್ನು ನೋಡಲು ಬೆಂಗಳೂರಿಗೆ ಬಂದಿರುವ ಪ್ರಿಯಾ ಅವರು ಬನ್ನೇರುಘಟ್ಟ ಪೊಲೀಸ್ ಠಾಣೆಗೆ ಹಾಜರಾಗಬೇಕು ಎಂದು ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ.

‘ನ.17 ಮತ್ತು 18ರಂದು ವಿಚಾರಣೆಗೆ ಹಾಜರಾಗಿ ವಿವರಣೆ ನೀಡಿದ್ದಾರೆ. ಬೆಂಗಳೂರಿಗೆ ಪ್ರಯಾಣಿಸುವುದಾಗಿ ತಿಳಿಸಿದ್ದರೂ ಮುಂಬೈ ಪೊಲೀಸರು ಹಿಂಬಾಲಿಸಿ ಎರಡು ನೋಟಿಸ್ ನೀಡಿದ್ದಾರೆ. ಬನ್ನೇರುಘಟ್ಟ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ತಿಳಿಸಿದ್ದಾರೆ. ಟ್ರಾನ್ಸಿಟ್ ಜಾಮೀನು ನೀಡಬೇಕು’ ಎಂದು ಕೋರಿದ್ದಾರೆ.

ADVERTISEMENT

‘ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಹೇಳಿಕೆ ಪಡೆಯಲು ಮುಂಬೈ ಪೊಲೀಸರು ಪ್ರಯತ್ನಿಸುತ್ತಿದ್ದಾರೆ’ ಎಂದು ಅರ್ಜಿದಾರರು ದೂರಿದ್ದಾರೆ.

‘ಮುಂಬೈ ಹೈಕೋರ್ಟ್‌ನಲ್ಲಿ ಇಂತದ್ದೇ ಅರ್ಜಿ ಸಲ್ಲಿಸಿರುವ ಪ್ರಿಯಾ ಮುಖರ್ಜಿ, ಕಾನೂನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮುಂಬೈ ಪೊಲೀಸರ ಪರ ವಕೀಲರು ವಾದಿಸಿದರು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಆದೇಶ ಕಾಯ್ದಿರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.