ADVERTISEMENT

ಗಂಗಾಕಲ್ಯಾಣ: ಅಕ್ರಮ ನಡೆಯದಿದ್ದಲ್ಲಿ ತನಿಖೆ ಏಕೆ– ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 26 ಮೇ 2022, 20:14 IST
Last Updated 26 ಮೇ 2022, 20:14 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ‘ಪರಿಶಿಷ್ಟರ ಕಲ್ಯಾಣಕಕ್ಕಾಗಿ ₹431 ಕೋಟಿ ಮೊತ್ತದ ‘ಗಂಗಾ ಕಲ್ಯಾಣ’ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪ್ರತಿಪಾದಿಸಿದ್ದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈಗ ತನಿಖಾ ತಂಡ ರಚಿಸಿರುವುದೇಕೆ’ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಂಗಾ ಕಲ್ಯಾಣ ಯೋಜನೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಕಾಂಗ್ರೆಸ್‌ನವರು ಯಾವುದೇ ಪುರಾವೆ, ದಾಖಲೆಗಳಿಲ್ಲದೇ ಕೇವಲ ಹಿಟ್‌ ಅಂಡ್‌ ರನ್‌ ಮಾಡುತ್ತಿದ್ದಾರೆ ಎಂದು ಸಚಿವ ಕೋಟ ಅವರು ಹೇಳಿದ್ದರು. ಅವರ ಈಗಿನ ನಡೆಗೆ ಏನು ಕಾರಣ’ ಎಂದು ಕೇಳಿದರು.

‘ಮೇ 11 ರಂದು ಈ ಪ್ರಕರಣದ ತನಿಖಾಧಿಕಾರಿಗಳು ಮುಖ್ಯಕಾರ್ಯಾಚರಣೆ ಅಧಿಕಾರಿ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ಮೂರು ಪ್ರಕರಣಗಳಲ್ಲಿ ಲೋಪವಾಗಿದೆ ಎಂದಿರುವ ವರದಿ, ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ತಿಳಿಸಿದೆ. ಸಚಿವರಿಗೆ ತಮ್ಮ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವಿಲ್ಲವೇ? ಅರಿವಿದ್ದರೂ ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದಾರಾ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ಪ್ರಿಯಾಂಕ್ ಆಗ್ರಹಿಸಿದರು.

ADVERTISEMENT

ಸರ್ಕಾರ ರಚಿಸಿರುವ ತನಿಖಾ ತಂಡಗಳಿಗೆ ಅಧಿಕಾರಿಗಳು ದಾಖಲೆ ನೀಡುತ್ತಿಲ್ಲ ಯಾಕೆ? ತನಿಖಾ ವರದಿಯಲ್ಲಿ ಯಾವ ನಿಗಮ ಎಷ್ಟು ದಾಖಲೆ ನೀಡಿದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ 30 ಪ್ಯಾಕೇಜ್‌ನಲ್ಲಿ 8 ಪ್ಯಾಕೇಜ್, ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮ 27 ಪ್ಯಾಕೇಜ್ ನಲ್ಲಿ 18 ಪ್ಯಾಕೇಜ್, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ 7 ಪ್ಯಾಕೇಜ್ ಪೈಕಿ 2ರ ಮಾಹಿತಿ ನೀಡಿದ್ದರೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು 14 ಪ್ಯಾಕೇಜ್‌ಗಳ ಪೈಕಿ ಒಂದರ ಮಾಹಿತಿಯನ್ನೂ ನೀಡದೇ ಇರುವುದು ವರದಿಯಲ್ಲಿದೆ’ ಎಂದು ಅವರು ವಿವರಿಸಿದರು.

ಗಂಗಾಕಲ್ಯಾಣದ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿದರೆ ಎಲ್ಲವೂ ಬಯಲಿಗೆ ಬರಲಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.