ADVERTISEMENT

ಮುಖ್ಯಮಂತ್ರಿಯವರೇ ನಮ್ಮ ಕಷ್ಟಕ್ಕೂ ಸ್ಪಂದಿಸಿ: ದಾಸರಹಳ್ಳಿ ನಿವಾಸಿಗಳ ಅಳಲು

ಪದ್ಮನಾಭನಗರಕ್ಕೆ ಬೆಣ್ಣೆ, ದಾಸರಹಳ್ಳಿಗೆ ಸುಣ್ಣ * ಪರಿಹಾರವೂ ಇಲ್ಲ, ಸಮಸ್ಯೆಗೆ ಮುಕ್ತಿಯೂ ಇಲ್ಲ

ವಿಜಯಕುಮಾರ್‌ ಎಸ್‌.ಕೆ
Published 27 ಅಕ್ಟೋಬರ್ 2020, 4:13 IST
Last Updated 27 ಅಕ್ಟೋಬರ್ 2020, 4:13 IST
ರುಕ್ಮಿಣಿನಗರದಲ್ಲಿ ಒತ್ತುವರಿಯಿಂದ ಕಿರಿದಾಗಿರುವುದು ರಾಜಕಾಲುವೆ
ರುಕ್ಮಿಣಿನಗರದಲ್ಲಿ ಒತ್ತುವರಿಯಿಂದ ಕಿರಿದಾಗಿರುವುದು ರಾಜಕಾಲುವೆ   

ಬೆಂಗಳೂರು: ‘ವರ್ಷದಲ್ಲಿ ನಾಲ್ಕೈದು ಬಾರಿ ಮನೆಗಳಿಗೆ ನೀರು ನುಗ್ಗಿದೆ. ಕೆರೆ ಏರಿಯೇ ಒಡೆದು ಇಡೀ ಪ್ರದೇಶ ಜಲಾವೃತವಾಗಿತ್ತು. ನಮಗೆ ಬಿಡಿಗಾಸಿನ ಪರಿಹಾರವೂ ಸಿಕ್ಕಿಲ್ಲ. ಕನಿಷ್ಠ ಪಕ್ಷ ಸಮಸ್ಯೆಗೆ ಶಾಶ್ವತ ಪರಿಹಾರವೂ ಸಿಕ್ಕಿಲ್ಲ. ಸಮಸ್ಯೆಯಿಂದ ಮುಕ್ತಿ ಸಿಗಲು ಹಾಗೂ ಪರಿಹಾರ ಬೇಕೆಂದರೆ ಕಂದಾಯ ಸಚಿವರು ಪ್ರತಿನಿಧಿಸುವ ಕ್ಷೇತ್ರಕ್ಕೆ ಸ್ಥಳಾಂತರ ಆಗಬೇಕೇ...?’

ಇದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚೊಕ್ಕಸಂದ್ರ, ಬೆಲ್ಮಾರ್ ಲೇಔಟ್, ರುಕ್ಮಿಣಿನಗರ, ಮಾರುತಿನಗರ ನಿವಾಸಿಗಳು ಕೇಳುತ್ತಿರುವ ಪ್ರಶ್ನೆ. ಹೊಸಕೆರೆಹಳ್ಳಿ ವಾರ್ಡ್‌ನ ಪ್ರವಾಹ ಸಂತ್ರಸ್ತರಿಗೆ ತಕ್ಷಣ ಪರಿಹಾರದ ಚೆಕ್‌ ನೀಡಿದಂತೆ ನಮಗೂ ಪರಿಹಾರ ನೀಡಿ ಎಂದು ಇಲ್ಲಿನ ನಿವಾಸಿಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಜೋರು ಮಳೆ ಬಂದಾಗಲೆಲ್ಲಾ ಎಂಟನೇ ಮೈಲಿ ಆಜುಬಾಜಿನಲ್ಲಿರುವ ಈ ಬಡಾವಣೆಗಳೇ ಮೊದಲು ನೆನಪಿಗೆ ಬರುತ್ತವೆ. ಕಳೆದ ವರ್ಷ ಅಕ್ಟೋಬರ್ 9ರ ಮಧ್ಯರಾತ್ರಿ ಒಡೆದ ಚೊಕ್ಕಸಂದ್ರದ ಕೆರೆಕೋಡಿ ಬೇಲ್ಮಾರ್ ಲೇಔಟ್ ಮತ್ತು ರುಕ್ಮಿಣಿನಗರವನ್ನು ಸಂಪೂರ್ಣ ಜಲಾವೃತಗೊಳಿಸಿತ್ತು.

ADVERTISEMENT

ಅದಾದ ಬಳಿಕ ಜೋರು ಮಳೆ ಬಂದಾಗಲೆಲ್ಲಾ ಈ ಬಡಾವಣೆಗಳು ಮುಳುಗೆದ್ದಿವೆ. ಒಂದೆಡೆ ರಾಜಕಾಲುವೆ ಒತ್ತುವರಿಯಾಗಿದ್ದರೆ, ಮತ್ತೊಂದೆಡೆ ತಡೆಗೋಡೆಗಳೇ ಇಲ್ಲ. ಜೋರು ಮಳೆ ಬಂದರೆ ನೀರು ನುಗ್ಗುವ ಭಯದಲ್ಲಿ ಚೊಕ್ಕಸಂದ್ರ ವಾರ್ಡ್‌ ಜನರು ಅರೆನಿದ್ರೆಯಲ್ಲಿ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ಮಳೆ ಬಂದರೆ ಜಾಗರಣೆಯನ್ನೇ ಮಾಡುತ್ತಿದ್ದಾರೆ.

‘ರಾಜಕಾಲುವೆ ನೀರಿನ ಜತೆಗೆ ಒಳಚರಂಡಿ ನೀರು, ಕಸಕಡ್ಡಿ, ಮಣ್ಣಿನ ರಾಶಿ ಮನೆ ಸೇರಿಕೊಳ್ಳುತ್ತದೆ. ಮನೆಯಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳು, ಬಟ್ಟೆಗಳು ನೀರು ಪಾಲಾಗುತ್ತಿವೆ. ನೆಲ ಮಾಳಿಗೆಯಲ್ಲಿದ್ದ ಸಿದ್ಧ ಉಡುಪು ತಯಾರಿಸುವ ಸಣ್ಣ ಘಟಕಕ್ಕೆ ಸಂಪೂರ್ಣ ನೀರು ತುಂಬಿಕೊಂಡಿತ್ತು. ₹ 40 ಲಕ್ಷ ಬಂಡವಾಳ ಸುರಿದಿದ್ದ ರಾಜು ಎಂಬ ಯುವಕ ಮುಖ್ಯಮಂತ್ರಿ ಕಚೇರಿ ತನಕ ಅರ್ಜಿ ಹಿಡಿದು ಹೋದರೂ ಬಿಡಿಗಾಸು ಪರಿಹಾರವನ್ನು ಸರ್ಕಾರ ಕರುಣಿಸಿಲ್ಲ’ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

‘ಕಂದಾಯ ಸಚಿವ ಆರ್. ಅಶೋಕ ಅವರು ಪ್ರತಿನಿಧಿಸುವ ಪದ್ಮನಾಭನಗರ ವ್ಯಾಪ್ತಿಯ ಹೊಸಕೆರೆಹಳ್ಳಿ ಗುರುದತ್ತ ಲೇಔಟ್‌ನಲ್ಲಿ ಮಳೆ ನೀರು ಮನೆಗೆ ನುಗ್ಗಿದ ಕೂಡಲೇ ಸರ್ಕಾರ ಕಣ್ಬಿಟ್ಟಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಿಯಾಗಿ ಸರ್ಕಾರದ ಪ್ರಮುಖರು ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ತ್ವರಿತಗತಿಯಲ್ಲಿ ಸಮಸ್ಯೆ ಸರಿಪಡಿಸಲಾಗುತ್ತಿದೆ. ನೀರು ನುಗ್ಗಿದ ಮನೆಯರಿಗೆ ₹25 ಸಾವಿರ ಪರಿಹಾರವನ್ನೂ ವಿತರಿಸಿದ್ದಾರೆ. ಅಲ್ಲಿನ ನಿವಾಸಿಗಳ ತೊಂದರೆಗೆ ಸರ್ಕಾರ ಸ್ಪಂದಿಸಿರುವುದಕ್ಕೆ ಬೇಸರವಿಲ್ಲ, ಬೇರೆ ಕ್ಷೇತ್ರಗಳ ಬಗ್ಗೆ ಯಾಕಿಷ್ಟು ತಾತ್ಸಾರ, ತಾರತಮ್ಯ’ ಎಂದು ಬೆಲ್ಮಾರ್‌ ಲೇಔಟ್‌ನ ಕುಮಾರ್ ಪ್ರಶ್ನಿಸಿದರು.

ದಾಸರಹಳ್ಳಿ ಜನ ಮಾಡಿರುವ ಪಾಪ ಏನು?

‘ರುಕ್ಮಿಣಿನಗರ, ಗುಂಡಪ್ಪ ಲೇಔಟ್, ಆರ್.ಆರ್. ಕಾಲೇಜು, ರಾಯಲ್ ಎನ್‌ಕ್ಲೇವ್, ಬಿಟಿಎಸ್ ಲೇಔಟ್‌, ರಾಜಗೋಪಾಲನಗರ, ಚೊಕ್ಕಸಂದ್ರದಲ್ಲಿ ನಾಲ್ಕೈದು ಬಾರಿ ಪ್ರವಾಹ ಆಗಿತ್ತು. ಯಾರೊಬ್ಬರೂ ತಿರುಗಿ ನೋಡಲಿಲ್ಲ, ಒಂದೇ ಒಂದು ರೂಪಾಯಿ ಪರಿಹಾರ ವಿತರಿಸಿಲ್ಲ. ದಾಸರಹಳ್ಳಿ ಜನ ಮಾಡಿರುವ ಪಾಪವಾದರೂ ಏನು’ ಎಂದು ಶಾಸಕ ಆರ್. ಮಂಜುನಾಥ್ ಪ್ರಶ್ನಿಸಿದರು.

ಪೀಣ್ಯ ಕೈಗಾರಿಕಾ ಪ್ರದೇಶ ಒಳಗೊಂಡ ಈ ಕ್ಷೇತ್ರ ಸರ್ಕಾರಕ್ಕೆ ಅತೀ ಹೆಚ್ಚು ವರಮಾನ ತಂದುಕೊಡುತ್ತಿದೆ. ಸಮಸ್ಯೆಯನ್ನು ಎಷ್ಟು ಬಾರಿ ಮನವರಿಕೆ ಮಾಡಿದರೂ ಪರಿಹರಿಸುತ್ತಿಲ್ಲ ಎಂದು ಬೇಸರ ತೋಡಿಕೊಂಡರು.

‘ಪದ್ಮನಾಭನಗರ ಕ್ಷೇತ್ರ ಎಂದ ಕೂಡಲೇ ಮುಖ್ಯಮಂತ್ರಿಯವರೇ ಸ್ಥಳಕ್ಕೆ ಹೋಗಿ ಬಂದಿದ್ದಾರೆ. ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿದ್ದಾರೆ. ನಮ್ಮ ಕ್ಷೇತ್ರದ ಸಮಸ್ಯೆಯನ್ನುಸರ್ಕಾರ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ರಾಜಕಾಲುವೆ ನೀರಿನ ಜತೆಗೆ ಕೊಳಚೆ ನೀರು, ಹಾವು, ಚೇಳುಗಳೂ ಮನೆಗೆ ನುಗ್ಗುತ್ತವೆ. ಜನರ ನೆಮ್ಮದಿಯೇ ಹಾಳಾಗಿದೆ. ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘33 ಅಡಿ ಅಗಲ ಇರಬೇಕಾದ ರಾಜಕಾಲುವೆಗಳು 3 ಅಡಿಗೆ ಕುಗ್ಗಿವೆ. ಗುರುತು ಮಾಡಿದ್ದರೂ ತೆರವು ಕಾರ್ಯಾಚರಣೆ ಆರಂಭಿಸಿಲ್ಲ. ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದರೆ ದಿನಕ್ಕೊಂದು ಸಬೂಬು ಹೇಳುತ್ತಾರೆ. ಜನರಿಗೆ ಉತ್ತರ ನೀಡುವುದು ಕಷ್ಟವಾಗಿದೆ’ ಎಂದರು.

ರುಕ್ಮಿಣಿನಗರ: ಬಗೆಹರಿಯದ ಸಮಸ್ಯೆ

‘ಮಳೆ ಬಂದಾಗಲೆಲ್ಲಾ ಈ ಬಡಾವಣೆಯ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯ ಎನ್ನುವಂತಾಗಿದೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಧನ ವಿತರಿಸುವ ಮಾತಿರಲಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನವೇ ನಡೆದಿಲ್ಲ’ ಎಂದು ರುಕ್ಮಿಣಿನಗರದ ನಿವಾಸಿ ಹೇಮಾಕ್ಷಿ ಅಂಬರೀಷ್‌ ಬೇಸರ ವ್ಯಕ್ತಪಡಿಸಿದರು.

‘ರಾಜಕಾಲುವೆ ಒತ್ತುವರಿಯಾಗಿರುವುದು ಮತ್ತು ತಡೆಗೋಡೆ ಇಲ್ಲದಿರುವುದು ಸಮಸ್ಯೆ ಉಲ್ಭಣಕ್ಕೆ ಕಾರಣವಾಗಿದೆ. ಹಲವು ವರ್ಷಗಳಿಂದ ಬಿಬಿಎಂಪಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ನೀರು ನುಗ್ಗಿದ ಮರುದಿನ ಅಧಿಕಾರಿಗಳು, ಜನಪ್ರತಿನಿಧಿಗಳು ಬಂದು ಭರವಸೆ ನೀಡಿ ಹೋಗುತ್ತಾರೆ. ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.