ADVERTISEMENT

ಪಶ್ಚಿಮ ಕಾರ್ಡ್‌ ರಸ್ತೆಗೆ ದೊರೆಯದ ಮುಕ್ತಿ

ಮೂರು ಜಂಕ್ಷನ್‌ಗಳಲ್ಲಿ ಕುಂಟುತ್ತಾ ಸಾಗಿರುವ ಮೇಲ್ಸೇತುವೆ ಕಾಮಗಾರಿ

ವಿಜಯಕುಮಾರ್ ಎಸ್.ಕೆ.
Published 30 ಸೆಪ್ಟೆಂಬರ್ 2020, 19:37 IST
Last Updated 30 ಸೆಪ್ಟೆಂಬರ್ 2020, 19:37 IST
ಕಾರ್ಡ್‌ ರಸ್ತೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ (ಪ್ರಜಾವಾಣಿ ಚಿತ್ರ / ರಂಜು ಪಿ.)
ಕಾರ್ಡ್‌ ರಸ್ತೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ (ಪ್ರಜಾವಾಣಿ ಚಿತ್ರ / ರಂಜು ಪಿ.)   

ಬೆಂಗಳೂರು: ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ತಡೆರಹಿತ ಸಂಚಾರ ವ್ಯವಸ್ಥೆ ರೂಪಿಸಲು ಆರಂಭವಾಗಿರುವ ಕಾಮಗಾರಿ ನಾಲ್ಕು ವರ್ಷಗಳಿಂದ ಕುಂಟುತ್ತಾ ಸಾಗಿರುವ ಕಾರಣ ಸಂಚಾರಕ್ಕೇ ತಡೆಯಾಗಿ ನಿಂತಿದೆ.

ದೀಪಾಂಜಲಿನಗರ ಮೆಟ್ರೊ ನಿಲ್ದಾಣದಿಂದ ಆರಂಭವಾಗಿ ವಿಜಯನಗರ, ಹೊಸಹಳ್ಳಿ, ಬಸವೇಶ್ವರನಗರ, ರಾಜಾಜಿನಗರ, ಇಸ್ಕಾನ್‌ ದೇವಸ್ಥಾನದ ಮುಂಭಾಗದಿಂದ ಹಾದು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ತನಕ ಈ ರಸ್ತೆ ಇದೆ.

ರಾಜಾಜಿನಗರದಿಂದ ಮಾಗಡಿ ರಸ್ತೆ ಟೋಲ್‌ಗೇಟ್ ಜಂಕ್ಷನ್ ತನಕ ನಿಲುಗಡೆ ರಹಿತ ಎತ್ತರಿಸಿದ (ಎಲಿವೇಟೆಡ್‌) ರಸ್ತೆ ನಿರ್ಮಿಸುವ ಯೋಜನೆ ನಾಲ್ಕು ವರ್ಷಗಳ ಹಿಂದೆ (2016) ಆರಂಭವಾಯಿತು.

ADVERTISEMENT

ಮಂಜುನಾಥನಗರದ ಬಳಿ ಮೇಲುಸೇತುವೆ, ಶಿವನಗರ ಜಂಕ್ಷನ್ ಬಳಿ ಕೆಳಸೇತುವೆ ಹಾಗೂ ಬಸವೇಶ್ವರ ವೃತ್ತದ ಬಳಿ ಮೇಲ್ಸೇತುವೆನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಪೈಕಿ ಮಂಜುನಾಥ ನಗರದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.

ಶಿವನಗರ ಬಳಿ ಕೆಳ ಸೇತುವೆ ನಿರ್ಮಾಣಕ್ಕೆ ಸ್ಥಳೀಯರು ಒಪ್ಪದ ಕಾರಣ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ನಡುವೆ, ರಾಜಾಜಿನಗರ 72ನೇ ಕ್ರಾಸ್‌ ಮೇಲ್ಸೇತುವೆ ಕಾಮಗಾರಿಗೂ ಸರ್ಕಾರ ಅನುಮೋದನೆ ನೀಡಿದ್ದು, ಬಸವೇಶ್ವರನಗರ ಹಾಗೂ 72ನೇ ಕ್ರಾಸ್ ಮೇಲ್ಸೇತುವೆ ಜೋಡಣೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್‌ಡೌನ್‌ಗೂ ಮೊದಲು ಆಮೆಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿ ಲಾಕ್‌ಡೌನ್ ಸಂದರ್ಭದಲ್ಲಿ ಸಂಪೂರ್ಣ ಸ್ಥಗಿತಗೊಂಡಿತ್ತು. ಈಗ ಮತ್ತೆ ಅಲ್ಪ ಪ್ರಮಾಣದಲ್ಲಿ ಆರಂಭವಾಗಿದೆ. ‌ತಡೆ ರಹಿತ ವಾಹನ ಸಂಚಾರಕ್ಕೆ ಅನುಕೂಲ ಆಗಬೇಕಿದ್ದ ಈ ರಸ್ತೆ, ಕಾಮಗಾರಿ ಪೂರ್ಣಗೊಳ್ಳದ ಕಾರಣ ವಾಹನಗಳ ಸಂಚಾರಕ್ಕೇ ತೊಂದರೆಯಾಗಿದೆ.

ಶಿವನಗರ, ವಾರಿಯರ್ ಬೇಕರಿ, ಬಸವೇಶ್ವರನಗರ ಜಂಕ್ಷನ್‌ ದಾಟುವುದು ವಾಹನ ಸವಾರರ ಪಾಲಿಗೆ ಸಂಕಟವಾಗಿದೆ. ಮಂಜುನಾಥನಗರ, ಶಿವನಗರ, ಬಸವೇಶ್ವರನಗರ, ಕಮಲಾನಗರ, ವಿಜಯನಗರ ಕಡೆಗೆ ಸಂಚರಿಸುವ ಜನ ನಿತ್ಯವೂ ಈ ಜಂಕ್ಷನ್‌ಗಳಲ್ಲಿ ಸಿಲುಕಿ ಪರಿತಪಿಸುತ್ತಿದ್ದಾರೆ.

ಕಳೆದ ವಾರ ಕಾಮಗಾರಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತ, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದ್ದರು. 15 ದಿನಗಳಿಗೊಮ್ಮೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದರು.

‘ಸಚಿವರು, ಅಧಿಕಾರಿಗಳು ಆಗಾಗ ಸ್ಥಳಕ್ಕೆ ಭೇಟಿ ನೀಡಿ ತ್ವರಿತವಾಗಿ ಕಾಮಗಾರಿ ಮುಗಿಸುವ ಭರವಸೆ ನೀಡುತ್ತಲೇ ಇದ್ದಾರೆ. ಆದರೆ, ಕಾಮಗಾರಿ ಮಂದಗತಿಯಲ್ಲೇ ನಡೆಯುತ್ತಿದೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

15 ನಿಮಿಷದ ದಾರಿ

8 ಕಿ.ಮೀ. ಉದ್ದದ ಕಾರ್ಡ್‌ ರಸ್ತೆಯಲ್ಲಿ ಸಾಗಲು ಸವಾರರಿಗೆ ಈಗ 30ರಿಂದ 40 ನಿಮಿಷ ಬೇಕಾಗುತ್ತಿದೆ. ಸಿಗ್ನಲ್ ರಹಿತ ರಸ್ತೆಯಾದರೆ 15 ನಿಮಿಷದಲ್ಲೇ ಕ್ರಮಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.

‘ರಾಜಾಜಿನಗರದಿಂದ ಮಾಗಡಿರಸ್ತೆ ಟೋಲ್‌ಗೇಟ್‌ ತನಕ ಸದ್ಯ ಮೂರು ಸಿಗ್ನಲ್‌ಗಳಿವೆ. ಎಲ್ಲ ಜಂಕ್ಷನ್‌ಗಳಲ್ಲೂ ಕಾಮಗಾರಿ ನಡೆಯುತ್ತಿದೆ. ಒಮ್ಮೆ ಕಾಮಗಾರಿ ಪೂರ್ಣಗೊಂಡರೆ ಸಂಚಾರ ಸುಲಭವಾಗಲಿದೆ’ ಎಂದು ಹೇಳುತ್ತಾರೆ.

ಫೆಬ್ರುವರಿಯಲ್ಲಿ ಪೂರ್ಣ

‘ಲಾಕ್‌ಡೌನ್ ವೇಳೆ ಕಾರ್ಮಿಕರು ಊರಿಗೆ ತೆರಳಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ಆರಂಭವಾಗಿದೆ. 2021ರ ಫೆಬ್ರುವರಿಯಲ್ಲಿ ಪೂರ್ಣಗೊಳ್ಳಲಿದೆ’ ಎಂದು ಬಿಬಿಎಂಪಿ ಯೋಜನೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಿಂದ ಜಾಗ ಹಸ್ತಾಂತರ ಪ್ರಕ್ರಿಯೆಯು ತಡವಾಯಿತು. ಹೀಗಾಗಿ, ಕಾಮಗಾರಿ ಪೂರ್ಣಗೊಳಿಸುವುದು ವಿಳಂಬವಾಯಿತು ಎಂದು ತಿಳಿಸಿದರು.

ಅಂಕಿ–ಅಂಶ

ಕಾರ್ಡ್‌ ರಸ್ತೆಯ ಉದ್ದ; 8 ಕಿ.ಮೀ

ನಿರ್ಮಾಣವಾಗುತ್ತಿರುವ ಮೇಲ್ಸೇತುವೆಗಳು; 4

ಯೋಜನೆಯ ಅಂದಾಜು ವೆಚ್ಚ; ₹112 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.