ಬೆಂಗಳೂರು: ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ಸಂಪಿಗೆಹಳ್ಳಿ, ವಿ.ವಿ.ಪುರಂ, ಕಾಟನ್‌ಪೇಟೆ ಹಾಗೂ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ನೈಜಿರಿಯಾದ ಮೂವರು ಸೇರಿದಂತೆ ಒಟ್ಟು 8 ಮಂದಿ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹2.74 ಕೋಟಿ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ನೈಜಿರಿಯಾದ ಆಗಸ್ಟಿನ್ ನಾನ್‌ಸೋ (39), ಉದ್ರಿಕ್ ಫೆಡಲೀಸ್ (34), ಎರೆಮನ್ ಸ್ಮಾರ್ಟ್ (40) ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.
‘ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ವಿದೇಶಿ ಪ್ರಜೆಗಳು ಎಂಡಿಎಂಎ ಕ್ರಿಸ್ಟಲ್, ಕೊಕೇನ್ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆ ನಡೆಸಿ, ₹50 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀರು ಹೇಳಿದರು.
‘ವಾಣಿಜ್ಯ ಹಾಗೂ ಮೆಡಿಕಲ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ ಆರೋಪಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಗೋವಾ, ಮುಂಬೈ ಹಾಗೂ ದೆಹಲಿಯಲ್ಲಿ ನೆಲೆಸಿದ್ದ ನೈಜಿರಿಯಾದ ಪ್ರಜೆಗಳಿಂದಲೇ ಮಾದಕ ವಸ್ತುಗಳನ್ನು ತಂದು ನಗರದ ಗ್ರಾಹಕರಿಗೆ ಪೂರೈಸುತ್ತಿದ್ದರು. ಎಂಡಿಎಂಎ ಕ್ರಿಸ್ಟಲ್ ಹಾಗೂ 1 ಗ್ರಾಂ ಕೊಕೇನ್ ಅನ್ನು ₹10ರಿಂದ 12 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬಂದ ಹಣದಿಂದ ಮೋಜಿನ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಆರೋಪಿಗಳ ವಿರುದ್ಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ.
ವಿ.ವಿ. ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಒಬ್ಬ ಡ್ರಗ್ಸ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ.
‘ಬಂಧಿತನಿಂದ ₹10 ಲಕ್ಷ ಮೌಲ್ಯ 5 ಕೆ.ಜಿ. ಗಾಂಜಾ, 7 ಎಲ್‌ಎಸ್‌ಡಿ ಸ್ಟ್ರಿಪ್ಟ್, 25 ಗ್ರಾಂ ಚರಸ್, 1 ಮೊಬೈಲ್ ಹಾಗೂ ಒಂದು ಕಾರನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಬಂಧಿತ ಆರೋಪಿಯು ವಿದೇಶದಲ್ಲಿರುವ ತನ್ನ ಸ್ನೇಹಿತ ಹಾಗೂ ಸ್ಥಳೀಯ ಡ್ರಗ್ಸ್ ಪೆಡ್ಲರ್‌ಗಳಿಂದ ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು’
ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಬ್ಬನನ್ನು ಬಂಧಿಸಿ, ₹ 14 ಲಕ್ಷ ಮೌಲ್ಯದ 7 ಕೆ.ಜಿ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿದೆ. ಕೊತ್ತನೂರು ಠಾಣಾ ವ್ಯಾಪ್ತಿಯಲ್ಲಿ ಒಬ್ಬ ಡ್ರಗ್ಸ್ ಪೆಡ್ಲರ್‌ನನ್ನು ಬಂಧಿಸಿ, ₹2 ಕೋಟಿ ಮೌಲ್ಯದ 2 ಕೆಜಿ ಹ್ಯಾಶಿಸ್ ಆಯಿಲ್, 716 ಗ್ರಾಂ ಚರಸ್ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಈತ ಆಂಧ್ರಪ್ರದೇಶದಿಂದ ಮಾದಕ ವಸ್ತು ಖರೀದಿಸಿ ನಗರದ ಗ್ರಾಹಕರಿಗೆ ಪೂರೈಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.