ADVERTISEMENT

ಆಸ್ತಿ ತೆರಿಗೆ ಬಾಕಿಗೆ ಭಾರಿ ದಂಡ: ಖಂಡನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 21:28 IST
Last Updated 6 ಆಗಸ್ಟ್ 2021, 21:28 IST
ಬಿಬಿಎಂಪಿ
ಬಿಬಿಎಂಪಿ   

ಬೆಂಗಳೂರು: ಬಿಬಿಎಂಪಿಯು ಮಹಾನಗರ ವ್ಯಾಪ್ತಿಯ ಆಸ್ತಿಗಳ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ನೀಡಿ ಭಾರಿ ದಂಡ ವಸೂಲಿ ಮಾಡಲು ಮುಂದಾಗಿರುವ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ತೀವ್ರವಾಗಿ ಖಂಡಿಸಿವೆ.

‘2016 –17 ರ ವಲಯ ಪುನರ್ ವಿಂಗಡಣೆ ಆಧಾರಿತ ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಆಸ್ತಿ ಮಾಲೀಕರಿಗೆ ಪಾಲಿಕೆ ಅಗತ್ಯ ನೋಟಿಸ್ ನೀಡಿಲ್ಲ. ಆದರೆ, ಅವರಿಂದ ಹಿಂದಿನ ದರದಲ್ಲೇ ತೆರಿಗೆ ಜಮಾ ಮಾಡಿಕೊಂಡು 5 ವರ್ಷಗಳ ನಂತರ ಇದೀಗ ವ್ಯತ್ಯಾಸದ ತೆರಿಗೆ ಮೊತ್ತವನ್ನು ಬಾಕಿ ಎಂದು ಪರಿಗಣಿಸಿ ದುಬಾರಿ ದಂಡ ವಸೂಲಿ ಮಾಡುತ್ತಿರುವುದು ಅಕ್ಷಮ್ಯ’ ಎಂದು ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಎನ್. ಉಮೇಶ್‌ ಖಂಡಿಸಿದ್ದಾರೆ.

‘ವಲಯ ಪುನರ್ ವಿಂಗಡಣೆ ಕುರಿತು ಮತ್ತು ಅದಕ್ಕೆ ಸಂಬಂಧಿಸಿದ ಪರೋಕ್ಷ ತೆರಿಗೆ ಹೆಚ್ಚಳ ಕುರಿತು ಈ ಹಿಂದೆಯೇ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದ್ಯಾವುದನ್ನೂ ಲೆಕ್ಕಿಸದೆ ವಲಯ ಪುನರ್ ವಿಂಗಡಣೆ ಮತ್ತು ಸಂಬಂಧಿತ ತೆರಿಗೆ ಹೆಚ್ಚಳಕ್ಕೆ ಮುಂದಾಗಿದ್ದ ಬಿಬಿಎಂಪಿಯು ತೆರಿಗೆ ಪಾವತಿ ವೇಳೆಯಲ್ಲಿಯೇ ಸಂಬಂಧಿತ ವ್ಯತ್ಯಾಸದ ಮೊತ್ತ ಕುರಿತು ಅಗತ್ಯ ತಿಳಿವಳಿಕೆ ನೀಡಬೇಕಿತ್ತು’ ಎಂದು ಅವರು ಹೇಳಿದ್ದಾರೆ.

ADVERTISEMENT

ಅಧಿಕಾರಿಗಳೇ ಹೊಣೆ:‘ಸಂಕಷ್ಟದ ಸಂದರ್ಭದಲ್ಲಿ ಜನರ ಮೇಲೆ ತೆರಿಗೆಯಲ್ಲದೆ ದಂಡದ ಹೊರೆ ಹೊರಿಸುವುದು ಸರಿಯಲ್ಲ. ಸಾರ್ವಜನಿಕರಿಗೆ ಅಧಿಕಾರಿಗಳೇ ಈ ಬಗ್ಗೆ ಮಾಹಿತಿ ನೀಡಬೇಕಿತ್ತು. ಇದು ಅಧಿಕಾರಿಗಳಿಂದ ಆಗಿರುವ ಪ್ರಮಾದ. ಅವರ ನಿರ್ಲಕ್ಷ್ಯವನ್ನು ಮರೆಮಾಚಿ, ಸಾರ್ವಜನಿಕರೇ ತೆರಿಗೆ ಪಾವತಿಸಿಲ್ಲ ಎಂದು ಹೇಳಲಾಗುತ್ತಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಯು.ಬಿ. ವೆಂಕಟೇಶ್‌ ಹೇಳಿದ್ದಾರೆ.

‘ಸರ್ಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಕೋವಿಡ್‌ ಬಿಕ್ಕಟ್ಟು ಪರಿಹಾರವಾದ ನಂತರ, ಮುಂದಿನ ವರ್ಷ ಪರಿಷ್ಕೃತ ತೆರಿಗೆ ವ್ಯವಸ್ಥೆ ಜಾರಿ ಮಾಡಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.