ADVERTISEMENT

ಕಲ್ಯಾಣ ಕರ್ನಾಟಕ ಅಭಿವೃದ್ಧಿ: ₹610 ಕೋಟಿ ಪ್ರಸ್ತಾವನೆ

ತಕ್ಷಣವೇ ₹100 ಕೋಟಿ ಬಿಡುಗಡೆಗೆ ಸಿಎಂ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2020, 12:58 IST
Last Updated 26 ಆಗಸ್ಟ್ 2020, 12:58 IST
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಪ್ರಸ್ತಾವನೆ ಸಲ್ಲಿಸಿದ ಮಾತುಕತೆ ನಡೆಸಿದ ಬಸವರಾಜ ಪಾಟೀಲ ಸೇಡಂ 
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಯ ಪ್ರಸ್ತಾವನೆ ಸಲ್ಲಿಸಿದ ಮಾತುಕತೆ ನಡೆಸಿದ ಬಸವರಾಜ ಪಾಟೀಲ ಸೇಡಂ    

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ₹610 ಕೋಟಿ ವೆಚ್ಚದ 11 ಅಂಶಗಳ ಪ್ರಸ್ತಾವನೆಯೊಂದನ್ನುಕಲ್ಯಾಣ ಕರ್ನಾಟಕದ ಮಾನವ ಸಂಪನ್ಮೂಲ, ಕೃಷಿ ಹಾಗೂಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

ಆ ಭಾಗದ ಮಾನವ ಸಂಪನ್ಮೂಲ, ಕೃಷಿ, ನೀರಾವರಿಗೆ ಸಂಬಂಧಿಸಿದಂತೆ ವಿವಿಧ ಯೋಜನೆಗಳ ಬಗ್ಗೆ ಸೇಡಂ ಅವರು ಮುಖ್ಯಮಂತ್ರಿಗೆ ವಿವರಿಸಿದರು. ಈ ಯೋಜನೆಗಳಿಗಾಗಿ ತಕ್ಷಣವೇ ₹100 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕಳೆದ ಬಜೆಟ್‌ನಲ್ಲಿ ₹500 ಕೋಟಿ ಅನುದಾನ ಘೋಷಿಸಲಾಗಿತ್ತು. ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಆಗಬೇಕು ಎಂದು ಸೇಡಂ ಅವರು ಮನವಿ ಮಾಡಿದರು.

ADVERTISEMENT

ಪ್ರಮುಖ ಬೇಡಿಕೆಗಳು: ‘ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನಲ್ಲಿ ಹಾಸ್ಟೆಲ್‌ ಸ್ಥಾಪಿಸಬೇಕು. ಪೀಣ್ಯ ಸಮೀಪ 38 ಗುಂಟೆ ಜಾಗ ಲಭ್ಯವಿದ್ದು, ಸುಮಾರು 300 ವಿದ್ಯಾರ್ಥಿಗಳು ಉಳಿದುಕೊಂಡು ಅಧ್ಯಯನ ನಡೆಸಬಹುದಾದ ಸಕಲ ವ್ಯವಸ್ಥೆಯನ್ನು ಇದು ಒಳಗೊಂಡಿರಬೇಕು ಎಂಬ ವಿಷಯ ಮುಖ್ಯಮಂತ್ರಿಯವರಿಗೆ ಗಮನಕ್ಕೆ ತಂದಿದ್ದೇವೆ’ ಎಂದರು.

‘ಇನ್ನು ಎರಡು ವಾರಗಳಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಇದಕ್ಕೆ ₹40 ಕೋಟಿ ವೆಚ್ಚವಾಗಲಿದ್ದು, ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯ ಮುಖ್ಯಮಂತ್ರಿ ವಿವೇಚನಾ ನಿಧಿಯಿಂದ ಹಣ ನೀಡಬಹುದು’ ಎಂದು ಸೇಡಂ ತಿಳಿಸಿದರು.

ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಈ ಹಿಂದೆ ₹20 ಕೋಟಿ ಅಂದಾಜು ವೆಚ್ಚ ಮಾಡಲಾಗಿತ್ತು. ಬಳಿಕ ಅದನ್ನು ₹500 ಕೋಟಿಗೆ ಏರಿಕೆ ಮಾಡಲಾಯಿತು. ಅದಕ್ಕೆ ಪೂರಕವಾಗಿ ಅಧ್ಯಯನ ನಡೆಸಿ ಸಂಪೂರ್ಣ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ಅವರು ಹೇಳಿದರು.

ಇದಲ್ಲದೆ, ಕೆಲವು ನೀರಾವರಿ ಯೋಜನೆಗಳು, ರೈಲ್ವೆ ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಕಲಬುರ್ಗಿ ಇಎಸ್ಐ ಆಸ್ಪತ್ರೆಯನ್ನು ಏಮ್ಸ್‌ (ಆಲ್‌ ಇಂಡಿಯಾ ಇನ್ಸ್‌ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್‌) ಆಗಿ ಪರಿವರ್ತಿಸಲು ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಕೇಂದ್ರ ಸರ್ಕಾರ ಜತೆ ಮಾತುಕತೆ ನಡೆಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.

ಸಭೆಯಲ್ಲಿ ಮುಖ್ಯಮಂತ್ರಿಯವರ ರಾಜಕೀಯ ‌ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.