ADVERTISEMENT

ಪ್ರತಿಭಟನನಿರತ ಅಂಧ ವಿದ್ಯಾರ್ಥಿಗಳು ವಶಕ್ಕೆ

* ಲ್ಯಾಪ್‌ಟಾಪ್‌ ನೀಡಲು ಆಗ್ರಹ * ಪೊಲೀಸರ ಕ್ರಮಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 19:28 IST
Last Updated 11 ಫೆಬ್ರುವರಿ 2020, 19:28 IST
ಅಂಧ ವಿದ್ಯಾರ್ಥಿನಿಯರಿಬ್ಬರನ್ನು ವಶಕ್ಕೆ ಪಡೆದು ವ್ಯಾನ್‌ಗೆ ಹತ್ತಿಸಿದ ಪೊಲೀಸರು
ಅಂಧ ವಿದ್ಯಾರ್ಥಿನಿಯರಿಬ್ಬರನ್ನು ವಶಕ್ಕೆ ಪಡೆದು ವ್ಯಾನ್‌ಗೆ ಹತ್ತಿಸಿದ ಪೊಲೀಸರು   

ಬೆಂಗಳೂರು: ಅಂಧ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ನೀಡಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿದ 30ಕ್ಕೂ ಹೆಚ್ಚು ಅಂಧ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಅಶೋಕನಗರ ಠಾಣೆಯಲ್ಲಿ ಸಂಜೆವರೆಗೂ ಕೂರಿಸಿ ನಂತರ ಬಿಡುಗಡೆ ಮಾಡಿದರು.

ವಿ.ವಿ.ಟವರ್‌ನಲ್ಲಿರುವ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರ ಕಚೇರಿ ಎದುರುರಾಷ್ಟ್ರೀಯ ಅಂಧರ ಒಕ್ಕೂಟದ ರಾಜ್ಯ ಯುವ ಸಮಿತಿ ನೇತೃತ್ವದಲ್ಲಿ ಸೇರಿದ್ದ ವಿದ್ಯಾರ್ಥಿಗಳು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

ಸ್ಥಳಕ್ಕೆ ಬಂದ ಪೊಲೀಸರು, ‘ವಿಧಾನಸೌಧ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯಲ್ಲಿ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನಿಷೇಧಾಜ್ಞೆ ಹೊರಡಿಸಿದ್ದಾರೆ. ಪ್ರತಿಭಟನೆ ಮಾಡಿದರೆ ಪ್ರಕರಣ ದಾಖಲಿಸುತ್ತೇವೆ’ ಎಂದು ಎಚ್ಚರಿಸಿದರು. ಅದಕ್ಕೆ ವಿದ್ಯಾರ್ಥಿಗಳು ಒಪ್ಪದಿದ್ದಾಗ ಪೊಲೀಸರು ವಶಕ್ಕೆ ಪಡೆದರು. ಅಂಧ ವಿದ್ಯಾರ್ಥಿಗಳನ್ನು ಎಳೆದು ವ್ಯಾನ್‌ಗೆ ಹತ್ತಿಸಿದರು.

ADVERTISEMENT

ವಶದಲ್ಲಿದ್ದ ವೇಳೆ ಕೆಲ ವಿದ್ಯಾರ್ಥಿಗಳು ಉಪವಾಸ ಮಾಡಿದರು. ಆ ಮೂಲಕ ಪೊಲೀಸರ ಕ್ರಮವನ್ನು ಖಂಡಿಸಿದರು.

ಎರಡು ಬಾರಿ ಇಲ್ಲದ ನಿಯಮ ಈಗೇಕೆ? : ‘ಉಚಿತ ಲ್ಯಾಪ್‌ಟಾಪ್‌ ನೀಡುವಿಕೆಯಲ್ಲಿ ವಿಳಂಬ ಮಾಡುತ್ತಿರುವುದು ಇದೇ ಮೊದಲಲ್ಲ. ನಮಗೆ ಪ್ರತಿಭಟನೆಯೂ ಹೊಸದಲ್ಲ. ಈ ಹಿಂದೆ ಎರಡು ಬಾರಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ಮಾಡಿ ಅರ್ಹರಿಗೆ ಲ್ಯಾಪ್‌ಟಾಪ್‌ ಕೊಡಿಸಿದ್ದೇವೆ’ ಎಂದು ಸಮಿತಿ ಸಂಯೋಜಕ ವೀರೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.