ADVERTISEMENT

ದಿನಗೂಲಿ ಮಹಿಳಾ ಕಾರ್ಮಿಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 20:45 IST
Last Updated 13 ಡಿಸೆಂಬರ್ 2020, 20:45 IST
ದಾಸನಪುರ ಎಪಿಎಂಸಿಯಲ್ಲಿ ದಿನಗೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು
ದಾಸನಪುರ ಎಪಿಎಂಸಿಯಲ್ಲಿ ದಿನಗೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು   

ಹೆಸರಘಟ್ಟ: ದಾಸನಪುರ ಎಪಿಎಂಸಿಯ ದಿನಗೂಲಿ ಕಾರ್ಮಿಕರು ವರ್ತಕರ ಸಂಘವು ನಡೆಸುತ್ತಿರುವ ಮುಷ್ಕರವನ್ನು ಬೆಂಬಲಿಸಿ ಪ್ರತಿಭಟನೆ ನಡೆಸಿದರು.

‘ಯಶವಂತಪುರ ಎಪಿಎಂಸಿಯನ್ನು ದಾಸನಪುರಕ್ಕೆ ಸ್ಥಳಾಂತರ ಮಾಡುವ ಸಲುವಾಗಿ ಸರ್ಕಾರವು ₹300 ಕೋಟಿಯಷ್ಟು ಬಂಡವಾಳ ಹೂಡಿದೆ.

ಆದರೆ, ಎಪಿಎಂಸಿಯ ಅಧಿಕಾರಿ ಶಾಹಿ ವರ್ಗವು ಮಾಮೂಲಿ ಹೆಚ್ಚು ಬರುತ್ತದೆ ಎನ್ನುವ ಕಾರಣಕ್ಕಾಗಿಯೇ ಯಶವಂತಪುರದಿಂದ ಈರುಳ್ಳಿ, ಆಲೂಗಡ್ಡೆ ಮತ್ತು ಬೆಳ್ಳುಳ್ಳಿ ವಹಿವಾಟು ಸ್ಥಳಾಂತರ ಮಾಡಲು ಹಿಂದೇಟು ಹಾಕುತ್ತಿದೆ. ಸರ್ಕಾರದ ಹಣ ಪೋಲಾಗುತ್ತಿದ್ದು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು’ ಎಂದು ದಾಸನಪುರ ಹಮಾಲಿ ಸಂಘದ ಅಧ್ಯಕ್ಷ ಚನ್ನೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದಾಸನಪುರ ಎಪಿಎಂಸಿಯಲ್ಲಿ ನೂರಾರು ಕುಟುಂಬಗಳು ಮೂಟೆ ಇಳಿಸುವ ಕೆಲಸ ಮಾಡುತ್ತಿವೆ. ಒಂದು ಮೂಟೆ ಇಳಿಸಿದರೆ ಸಿಗುವ ಕೂಲಿ ಕೇವಲ ಹತ್ತು ರೂಪಾಯಿ. ದಾಸನಪುರ ಮಾರುಕಟ್ಟೆಯಲ್ಲಿ ಈಗ ಐವತ್ತರಿಂದ ಅರವತ್ತು ಮಳಿಗೆಯಲ್ಲಿ ವರ್ತಕರು ವ್ಯಾಪಾರ ಮಾಡುತ್ತಿದ್ದಾರೆ. ದಿನಕ್ಕೆ ಬರುವುದು ಒಂದು ಅಥವಾ ಎರಡು ಲಾರಿಗಳು ಮಾತ್ರ. ನೂರು ಜನರು ಮೂಟೆ ಇಳಿಸುವವರು ಇದ್ದಾರೆ. ಒಬ್ಬರು ದಿನಕ್ಕೆ ಇಪ್ಪತ್ತು ರೂಪಾಯಿ ಕೂಲಿ ಸಿಗುವುದು ಕಷ್ಟವಾಗಿದೆ’ ಎಂದು ಅವರು ಅಳಲು ತೊಡಿಕೊಂಡರು.

‘ಯಶವಂತಪುರ ಎಪಿಎಂಸಿಯಲ್ಲಿ ಲಾರಿಗಳು ನಿಲ್ಲುವುದಕ್ಕೆ ಜಾಗವಿಲ್ಲ. ಒಂದು ಲಾರಿಯ ಮೂಟೆ ಇಳಿಸುವುದಕ್ಕೆ ಕನಿಷ್ಠ ಮೂರರಿಂದ ನಾಲ್ಕು ಘಂಟೆಗಳು ಬೇಕು. ರಾತ್ರಿ ಹನ್ನೆರಡು ಘಂಟೆಯ ತನಕ ಕೆಲಸ ಮಾಡಿದರೂ 50 ರೂಪಾಯಿ ಕೂಲಿ ಸಿಗುವುದು ಕಷ್ಟ. ಸರ್ಕಾರವು ಇಲ್ಲಿಯ ಸಮಸ್ಯೆಗಳನ್ನು ಅರಿತು ದಾಸನಪುರದಲ್ಲಿ ಉಪ ಮಾರುಕಟ್ಟೆಯನ್ನು ತೆರೆಯಿತು. ಆದರೆ, ಅಲ್ಲಿಗೆ ಮಾರುಕಟ್ಟೆ ಸ್ಥಳಾಂತರ ಮಾಡದೇ, ಅಭಿವೃದ್ದಿ ಪಡಿಸದೇ ಬಡವರ ಬಾಳನ್ನು ಹಾಳುಗೆಡವಿತು’ ಎಂದು ಕಾರ್ಮಿಕೆ ರತ್ನಮ್ಮ ಬೇಸರ ವ್ಯಕ್ತಪಡಿಸಿದರು.

‘ಮನೆ ಬಾಡಿಗೆ, ಮಕ್ಕಳ ಓದು, ಸಂಸಾರದ ನಿರ್ವಹಣೆ ಮಾಡಲಾಗದೇ ಬೇರೆ ಕೆಲಸ ಮಾಡಬೇಕೆಂದು ಯೋಚನೆ ಮಾಡುತ್ತಾ ಇದ್ದೇವೆ. ಬದುಕು ಕಷ್ಟವಾಗಿದೆ’ ಎಂದು ಕಾರ್ಮಿಕರಾದ ರಾಜಮ್ಮ ಕಣ್ಣೀರು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.