ADVERTISEMENT

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 15:35 IST
Last Updated 24 ಜನವರಿ 2025, 15:35 IST
ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿರುವ ಕ್ರಮ ಖಂಡಿಸಿ, ಆಲ್‌ ಇಂಡಿಯಾ ಕಾಲೇಜ್‌ ಆ್ಯಂಡ್ ಯೂನಿವರ್ಸಿಟಿ ಟೀಚರ್ಸ್‌ ಅಸೋಸಿಯೇಷನ್ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು
– ಪ್ರಜಾವಾಣಿ ಚಿತ್ರ
ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕಲು ಮುಂದಾಗಿರುವ ಕ್ರಮ ಖಂಡಿಸಿ, ಆಲ್‌ ಇಂಡಿಯಾ ಕಾಲೇಜ್‌ ಆ್ಯಂಡ್ ಯೂನಿವರ್ಸಿಟಿ ಟೀಚರ್ಸ್‌ ಅಸೋಸಿಯೇಷನ್ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ವಜಾ ಮಾಡದೇ ಕೆಲಸದಲ್ಲಿ ಮುಂದುವರೆಸುವಂತೆ ಆಗ್ರಹಿಸಿ, ‘ಆಲ್‌ ಇಂಡಿಯಾ ಕಾಲೇಜು ಆ್ಯಂಡ್‌ ಯೂನಿವರ್ಸಿಟಿ ಟೀಚರ್ಸ್‌ ಅಸೋಸಿಯೇಷನ್‌’ ನೇತೃತ್ವದಲ್ಲಿ ಅತಿಥಿ ಉಪನ್ಯಾಸಕರು ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಅತಿಥಿ ಉಪನ್ಯಾಸಕರ ವಿರೋಧಿ ಆದೇಶವನ್ನು ಕಾಲೇಜು ಶಿಕ್ಷಣ ಇಲಾಖೆ ತಕ್ಷಣವೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

‘ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಮಾನದಂಡದ ನೆಪ ಹೇಳಿಕೊಂಡು ಸುಮಾರು ಐದು ಸಾವಿರಕ್ಕೂ ಹೆಚ್ಚು ಪದವಿ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದು ಅತ್ಯಂತ ಅಮಾನವೀಯ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಉಪನ್ಯಾಸಕರನ್ನು ಬದಲಾಯಿಸುವ ನೀತಿಯಿಂದ ಅತಿಥಿ ಉಪನ್ಯಾಸಕರಿಗೆ ತೊಂದರೆ ಆಗುವುದರ ಜೊತೆಯಲ್ಲೇ ವಿದ್ಯಾರ್ಥಿಗಳೂ ಸಹ ಜ್ಞಾನದಿಂದ ವಂಚಿತರಾಗುತ್ತಾರೆ’ ಎಂದು ಪ್ರತಿಭಟನಕಾರರು ಹೇಳಿದರು.

ADVERTISEMENT

‘ಹಲವು ವರ್ಷದಿಂದ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಮೇಲೆ ಯುಜಿಸಿಯ ಇತ್ತೀಚಿನ ಮಾನದಂಡಗಳನ್ನು ಹೇರಲು ಮುಂದಾಗಿರುವುದು ಸಹಜ ನ್ಯಾಯಕ್ಕೆ ವಿರುದ್ಧವಾಗಿದೆ. ಅಲ್ಲದೇ ಕಾನೂನು ಬಾಹಿರ ಕ್ರಮವೂ ಆಗಿದೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಯಾವುದೇ ಹೊಸ ನೀತಿಗಳು ಜಾರಿಗೆ ಬಂದಾಗ ಮುಂದಿನ ನೇಮಕಾತಿಗೆ ಅನ್ವಯ ಆಗಬೇಕೇ ಹೊರತು ಪೂರ್ವಾನ್ವಯ ಆಗಬಾರದು’ ಎಂದು ಆಗ್ರಹಿಸಿದರು.

‘ಎಂ.ಫಿಲ್‌ ಪದವಿಯನ್ನು ನೆಟ್‌ ಹಾಗೂ ಸ್ಲೆಟ್‌ಗೆ ಸಮಾನಾಂತರವಾಗಿ ಪರಿಗಣಿಸಬೇಕು. ಪಿ.ಎಚ್‌ಡಿ, ಯುಜಿಸಿ ನೆಟ್‌ ಅರ್ಹತೆ ಇಲ್ಲದಿದ್ದರೂ ಹಲವಾರು ವರ್ಷಗಳಿಂದ ಗುಣಮಟ್ಟದ ಬೋಧನೆಯಲ್ಲಿ ತೊಡಗಿರುವ ಮತ್ತು ಕೆಲಸದಿಂದ ಹೊರಗುಳಿದ ಅತಿಥಿ ಉಪನ್ಯಾಸಕರನ್ನು ಕೆಲಸದಲ್ಲಿ ಮುಂದುವರೆಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಸ್‌.ಸುನಿತಾ, ಸಿ.ಎಂ.ಐಶ್ವರ್ಯಾ, ಜಿ.ವಿ.ರಮೇಶ್, ಮಹಾದೇವ, ಆರಿಫ್‌ ಕಾರ್ಲೆ, ರಾಮಣ್ಣ ಇಬ್ರಾಹಿಂಪುರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.