ADVERTISEMENT

ಐಕ್ಯ ಹೋರಾಟ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 20:35 IST
Last Updated 7 ಡಿಸೆಂಬರ್ 2020, 20:35 IST
ಐಕ್ಯ ಹೋರಾಟ ಸಮಿತಿಯಿಂದ ಗಾಂಧಿ ಪ್ರತಿಮೆ ಎದುರು ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಯಿತು. ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್, ಮುಖಂಡ ಬಿ.ಆರ್. ಪಾಟೀಲ, ವಕೀಲ ರವಿವರ್ಮಕುಮಾರ್ ಇತರರು ಪಾಲ್ಗೊಂಡಿದ್ದರು
ಐಕ್ಯ ಹೋರಾಟ ಸಮಿತಿಯಿಂದ ಗಾಂಧಿ ಪ್ರತಿಮೆ ಎದುರು ಸೋಮವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಲಾಯಿತು. ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ, ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್, ಮುಖಂಡ ಬಿ.ಆರ್. ಪಾಟೀಲ, ವಕೀಲ ರವಿವರ್ಮಕುಮಾರ್ ಇತರರು ಪಾಲ್ಗೊಂಡಿದ್ದರು   

ಬೆಂಗಳೂರು: ‘ಮದ್ದು–ಗುಂಡು ಈ ದೇಶಕ್ಕೆ ಅನಿವಾರ್ಯ ಅಲ್ಲ. ನೇಗಿಲು ಇಲ್ಲದಿದ್ದರೆ ದೇಶಕ್ಕೆ ಉಳಿಗಾಲವೇ ಇಲ್ಲ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಅಭಿಪ್ರಾಯಪಟ್ಟರು.

ರೈತ, ಕಾರ್ಮಿಕ, ದಲಿತ ವಿರೋಧಿ ಕಾಯ್ದೆಗಳ ಜಾರಿಗೆಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿವೆ ಎಂದು ಆರೋಪಿಸಿ ರೈತ, ದಲಿತ, ಕಾರ್ಮಿಕ, ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿಯಿಂದ ಸೋಮವಾರ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಆರಂಭಿಸಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ರೈತನಿಲ್ಲದಿದ್ದರೆ ದೇಶಕ್ಕೆ ಎಷ್ಟು ತೊಂದರೆಯಾಗಲಿದೆ ಎಂಬುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ರೈತ ವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತರ ಮೇಲೆ ಕಾನೂನು ಹೇರುವುದು ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆ. ಇವುಗಳ ಜಾರಿಗೆ ಮುನ್ನ ಚರ್ಚೆ ನಡೆಸಬೇಕು. ಅಧಿಕಾರ ದುರ್ಬಳಕೆ ಮಾಡಿಕೊಂಡು ಪ್ರಜೆಗಳ ಮೇಲೆಯೇ ದಬ್ಬಾಳಿಕೆ ನಡೆಸಬಾರದು. ಲವ್ ಜಿಹಾದ್ ರೀತಿಯ ವಿಷಯಗಳಿಗೆ ಆದ್ಯತೆ ನೀಡುವ ಬದಲು ಸ್ವಾಮಿನಾಥನ್ ವರದಿ ಜಾರಿಗೆ ಆಸಕ್ತಿ ತೋರಿಸಲಿ ಎಂದರು.

ರೈತ ಮುಖಂಡ ಕುರುಬೂರು ಶಾಂತಕುಮಾರ್ ಮತ್ತು ಬಡಗಲಪುರ ನಾಗೇಂದ್ರ ಮಾತನಾಡಿ, ‘ಮಂಗಳವಾರ ನಡೆಯಲಿರುವ ಭಾರತ್ ಬಂದ್‌ಗೆ ಕರ್ನಾಟಕದ ರೈತರ ಸಂಪೂರ್ಣವಾಗಿ ಬೆಂಬಲ ಇದೆ. ಬಂದ್ ನಡೆಸಲು ಪ್ರತಿ ಹಳ್ಳಿಯಲ್ಲೂ ರೈತರು ಸಜ್ಜಾಗಿದ್ದಾರೆ. ಗುರುವಾರ ವಿಧಾನಸೌಧ ಮುತ್ತಿಗೆ ಹಾಕುವ ಸಂಬಂಧ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.