ADVERTISEMENT

ಸಾದಹಳ್ಳಿ ಟೋಲ್‌ನಲ್ಲಿ ಉಚಿತ ಪಾಸ್‌ಗೆ ನಿರ್ಬಂಧ: ಸ್ಥಳೀಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 22:07 IST
Last Updated 11 ಮಾರ್ಚ್ 2021, 22:07 IST
ಸ್ಥಳೀಯರು ಟೋಲ್‌ ನಿರ್ವಹಣೆ ಘಟಕದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು.
ಸ್ಥಳೀಯರು ಟೋಲ್‌ ನಿರ್ವಹಣೆ ಘಟಕದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದರು.   

ಯಲಹಂಕ: ಅಂತರರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್‌ನಲ್ಲಿ ಸ್ಥಳೀಯರ ವಾಹನಗಳ ಉಚಿತ ಪ್ರವೇಶಕ್ಕಾಗಿ ನೀಡಿದ್ದ ಪಾಸ್‌ಗಳಿಗೆ ಪ್ರವೇಶ ನಿರಾಕರಿಸಿರುವುದನ್ನು ವಿರೋಧಿಸಿ ಸ್ಥಳೀಯರು ಟೋಲ್ ಸಮೀಪದಲ್ಲಿ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಉದಯಶಂಕರ್ ಮಾತನಾಡಿ, ’ಈ ಹಿಂದೆ ನವಯುಗ ಕಂಪನಿಯವರು, ಐದು ಕಿ.ಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳ ಜನರು ತಮ್ಮ ವಾಹನಗಳ ಮೂಲಕ ಉಚಿತವಾಗಿ ಟೋಲ್‌ಗಳಲ್ಲಿ ಪ್ರವೇಶಿಸಲು ಪಾಸ್ ನೀಡಿದ್ದರು. ಈಗ ಹೊಸದಾಗಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿರುವ ಅಥಾಂಗ್ ಇನ್ಫ್ರಾ ಟೋಲ್‌ ಕಂಪನಿಯವರು, ಪಾಸ್ ತೋರಿಸಿದರೆ ಪ್ರವೇಶಕ್ಕೆ ಅವಕಾಶ ನೀಡದೆ, ಹಣ ಕಟ್ಟಬೇಕೆಂದು ಹೇಳುತ್ತಿದ್ದಾರೆ. ಇದರಿಂದ ಟೋಲ್‌ ಅಕ್ಕಪಕ್ಕದ ಗ್ರಾಮಗಳ ಜನರು, ದೇವನಹಳ್ಳಿ ನ್ಯಾಯಾಲಯ, ಬೆಳೆಗಳಿಗೆ ಔಷಧಿ ಖರೀದಿಸಲು, ಆಸ್ಪತ್ರೆ ಹಾಗೂ ತಮ್ಮ ಜಮೀನುಗಳಿಗೆ ತೆರಳಲು ತುಂಬಾ ತೊಂದರೆ ಅನುಭವಿಸಬೇಕಾಗಿದೆ‘ ಎಂದು ದೂರಿದರು.

’ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರ್ವಿಸ್‌ ರಸ್ತೆಯನ್ನು ನಿರ್ಮಿಸದಿರುವುದೂ ಸೇರಿದಂತೆ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಈಗಿನ ಹೊಸ ದರದಂತೆ ಒಮ್ಮೆ ಟೋಲ್‌ನಲ್ಲಿ ಪ್ರವೇಶಿಸ ಬೇಕಾದರೆ ₹95 ನೀಡಬೇಕು. ಸ್ಥಳೀಯರು ತಮ್ಮ ಕೆಲಸ ಕಾರ್ಯಗಳಿಗಾಗಿ ಹಲವು ಸಲ ಟೋಲ್ ಮೂಲಕ ಪ್ರವೇಶಿಸಬೇಕಾಗಿದ್ದು, ಪ್ರತಿ ಸಲ ಹಣ ನೀಡಲು ಸಾಧ್ಯವೇ‘ ಎಂದು ಪ್ರಶ್ನಿಸಿದ ಅವರು, ’ಸ್ಥಳೀಯ ಜನರಿಗೆ ಅನುಕೂಲವಾಗುವಂತೆ ಕೂಡಲೇ ಸರ್ವಿಸ್ ರಸ್ತೆ ನಿರ್ಮಿಸಬೇಕು. ಅಲ್ಲಿಯವರೆಗೆ ಮೊದಲಿನಂತೆ ಉಚಿತ ಪಾಸ್ ನೀಡಬೇಕು‘ ಎಂದು ಒತ್ತಾಯಿಸಿದರು.

ADVERTISEMENT

ನಂತರ ಟೋಲ್‌ ನಿರ್ವಹಣೆ ಘಟಕದ ಮುಖ್ಯಸ್ಥರು ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಿದರು. ಟೋಲ್‌ನ ಯೋಜನಾ ಮುಖ್ಯಸ್ಥ ಸುಭಾಷಿಸ್ ಕುಂಡು ಪ್ರತಿಕ್ರಿಯಿಸಿ, ’ಈ ಹಿಂದೆ ಕೆಲವು ಮಾನದಂಡಗಳನ್ನು ಅನುಸರಿಸದೆ ಉಚಿತ ಪಾಸ್‌ಗಳನ್ನು ವಿತರಿಸಿರುವುದರಿಂದ ದುರುಪಯೋಗವಾಗುತ್ತಿದ್ದು, ಹೊಸ ಪಾಸ್‌ಗಳನ್ನು ನೀಡುವ ಹಾಗೂ ಸ್ಥಳಿಯರಿಗೆ ಪ್ರತ್ಯೇಕ ಸರ್ವಿಸ್‌ ರಸ್ತೆ ನಿರ್ಮಿಸುವ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅಲ್ಲಿಯವರೆಗೆ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಸ್ಥಳೀಯರು ಆಧಾರ್, ಚುನಾವಣಾ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಪತ್ರ ತೋರಿಸಿ ಟೋಲ್‌ಗಳಲ್ಲಿ ಉಚಿತವಾಗಿ ಪ್ರವೇಶಿಸಬಹುದಾಗಿದೆ‘ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಕೆ.ಮಹೇಶ್ ಕುಮಾರ್, ಬೈರೇಗೌಡ, ಸ್ಥಳೀಯ ಮುಖಂಡರಾದ ನರಸಿಂಹಮೂರ್ತಿ, ಜಾಲಾ ಕಿಟ್ಟಿ, ಗೋವಿಂದರಾಜ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.