ADVERTISEMENT

ದೇಶದ ನಕ್ಷೆಯ ಮೂಲ ಈ ‘ಜಿಟಿಎಸ್’ ಬಿಂದು

ಪ್ರಪಂಚದ ಅತಿದೊಡ್ಡ ಭೌಗೋಳಿಕ ಸಮೀಕ್ಷೆಗೆ ನಾಂದಿ ಹಾಡಿದ ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 20:45 IST
Last Updated 9 ಏಪ್ರಿಲ್ 2022, 20:45 IST
ಮೇಖ್ರಿ ವೃತ್ತ ಬಳಿಯ ರಮಣ ಮಹರ್ಷಿ ಉದ್ಯಾನದಲ್ಲಿರುವ ಗ್ರೇಟ್‌ ಟ್ರಿಗೊನೊಮೆಟ್ರಿಕಲ್‌ ಸರ್ವೆಯ ಬಿಂದುವಿನ ಕುರುಹು        –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌.
ಮೇಖ್ರಿ ವೃತ್ತ ಬಳಿಯ ರಮಣ ಮಹರ್ಷಿ ಉದ್ಯಾನದಲ್ಲಿರುವ ಗ್ರೇಟ್‌ ಟ್ರಿಗೊನೊಮೆಟ್ರಿಕಲ್‌ ಸರ್ವೆಯ ಬಿಂದುವಿನ ಕುರುಹು        –ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್‌.   

ಬೆಂಗಳೂರು: ಉದ್ಯಾನ ನಗರಿಯು ಅನೇಕ ಮಹಾನ್‌ ಯೋಜನೆಗಳಿಗೆ ನಾಂದಿ ಹಾಡಿದೆ. ಅಂತಹ ಮಹತ್ತರ ಯೋಜನೆಗಳಲ್ಲಿ ಒಂದು ‘ಗ್ರೇಟ್‌ ಟ್ರಿಗೊನೊಮೆಟ್ರಿಕಲ್‌ ಸರ್ವೆ’ (ತ್ರಿಕೋನಮಿತಿಯ ಸಮೀಕ್ಷೆ). ಇದು ಪ್ರಪಂಚದ ಅತಿದೊಡ್ಡ ಭೌಗೋಳಿಕ ಸಮೀಕ್ಷೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

ದೇಶದ ಭೌಗೋಳಿಕ ಸಮೀಕ್ಷೆಯನ್ನು ಮೊದಲ ಬಾರಿ ವೈಜ್ಞಾನಿಕವಾಗಿ ಕೈಗೊಂಡಿದ್ದು ಬೆಂಗಳೂರಿನಲ್ಲಿ. ಸಮೀಕ್ಷೆಗಾಗಿ ನಿರ್ಮಿಸಿದ ತ್ರಿಕೋನಮಿತಿಯ ಬಿಂದುವಿನ ಒಂದು ಕುರುಹು ಮೇಖ್ರಿ ವೃತ್ತದ ರಮಣ ಮಹರ್ಷಿ ಉದ್ಯಾನದಲ್ಲಿದೆ. ಇನ್ನೊಂದು ಕಣ್ಣೂರಿನ ಬಳಿ ಇದೆ. 1800ರಲ್ಲಿ ನಿರ್ಮಿಸಲಾದ ಈ ಬಿಂದುಗಳಿಗೆ ಈಗ 221 ವರ್ಷಗಳು.

ಉದ್ಯಾನದಲ್ಲಿನ ಕೆಂಪೇಗೌಡ ಕಾವಲು ಗೋಪುರದ ಮುಂದಿನ ಬೆಣಚು ಕಲ್ಲಿನ ಹಾದಿಯು ನಿಮ್ಮನ್ನು ಕಟ್ಟೆಯೊಂದರ ಬಳಿಗೆ ಕರೆದೊಯ್ಯುತ್ತದೆ. ಅದರ ಮೇಲಿನ ಚೌಕಾಕಾರದ ಆಕೃತಿ ಗಮನ ಸೆಳೆಯುತ್ತದೆ. ಸನಿಹಕ್ಕೆ ಹೋದಾಗಲೇ ಅಲ್ಲಿ ತ್ರಿಕೋನಮಿತಿ ಸಮೀಕ್ಷೆಯ ಬಿಂದು ಇರುವುದು ತಿಳಿಯುತ್ತದೆ.

ADVERTISEMENT

ಸಮೀಕ್ಷೆ ಬಿಂದುವಿನ ಇತಿಹಾಸವು ಹಲವು ಕೌತುಕಗಳಿಂದ ಕೂಡಿದೆ. 1799ರ ಆಂಗ್ಲೊ ಮೈಸೂರು ಯುದ್ಧದಲ್ಲಿ ಟಿಪ್ಪು ಸೋತ ನಂತರ ಮೈಸೂರು ಪ್ರಾಂತ್ಯ ಬ್ರಿಟಿಷರ ವಶವಾಯಿತು. ಆಗ ಮದ್ರಾಸ್ ಮತ್ತು ಮಂಗಳೂರಿನವರೆಗೆ ವಿಸ್ತರಿಸಿದ್ದ ಸಾಮ್ರಾಜ್ಯದ ಭೌಗೋಳಿಕ ಸಮೀಕ್ಷೆ ನಡೆಸಿಕೊಡುವುದಾಗಿ ಟಿಪ್ಪುವಿನೊಡನೆ ಕಾದಾಡಿದ್ದ ಸೈನಿಕ ವಿಲಿಯಂ ಲ್ಯಾಂಪ್ಟನ್‌ ಬ್ರಿಟಿಷ್‌ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸುತ್ತಾನೆ.

ತಾವು ಗೆದ್ದ ಪ್ರದೇಶಗಳಲ್ಲಿ ಸೈನ್ಯದ ಸಂಚಾರಕ್ಕೆ ಮತ್ತು ಇಲ್ಲಿ ಕಂದಾಯ ವಸೂಲಿ ಮಾಡಲು ಭೂಮಿಯ ಬಗ್ಗೆ ಅರಿವು ಅವಶ್ಯಕ ಎಂದರಿತ ಬ್ರಿಟಿಷ್‌ ಆಡಳಿತ ಈ ಸಮೀಕ್ಷೆಗೆ 1800ರಲ್ಲಿ ಅನುಮೋದನೆ ನೀಡುತ್ತದೆ. ನಂತರ ಲ್ಯಾಂಪ್ಟನ್‌ ಸಮೀಕ್ಷೆಗೆ ಅತ್ಯಾಧುನಿಕ ಸಾಮಗ್ರಿಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಾನೆ.ಆಗ ಲ್ಯಾಂಪ್ಟನ್‌ ಬೆಂಗಳೂರಿನ ಹಲಸೂರು ಬಳಿ ಕಚೇರಿ ಹೊಂದಿದ್ದ. ಸಾಮಗ್ರಿಗಳು ತಲುಪಲು ನಾಲ್ಕು ವರ್ಷಗಳು ಬೇಕಾಗುತ್ತವೆ ಎಂದರಿದ ಲ್ಯಾಂಪ್ಟನ್‌ ಸಮಯ ಹಾಳು ಮಾಡದೆ ಸಮೀಕ್ಷೆಗೆ ಆಧುನಿಕ ತ್ರಿಕೋನಮಿತಿಯ ತಂತ್ರಗಳನ್ನು ಬಳಸಿಕೊಂಡ. ಮೇಖ್ರಿ ಮತ್ತು ಕಣ್ಣೂರು ಬಳಿ ಬಿಂದುಗಳನ್ನು ನಿರ್ಮಿಸಿ ಸಮೀಕ್ಷೆ ನಡೆಸಿದ.

ಅಗರದಿಂದ ಲಿಂಗರಾಜಪುರವರೆಗೆ ಮೊದಲ ಸಮೀಕ್ಷೆಯನ್ನು ಲ್ಯಾಂಪ್ಟನ್‌ ಪ್ರಾರಂಭಿಸಿದ. ಈ ಮಾರ್ಗದಲ್ಲಿದ್ದ ಬೆಳಂದೂರು ಕೆರೆಯಲ್ಲಿ ನೀರು ತುಂಬಿದ್ದರಿಂದ ಅದನ್ನು ಸ್ಥಗಿತಗೊಳಿಸಿ ಮೇಖ್ರಿಯಲ್ಲಿ ಮತ್ತೆ ಸಮೀಕ್ಷೆ ಪ್ರಾರಂಭಿಸಿದ ಎಂದು ಸಮೀಕ್ಷೆ ಬಿಂದುವಿನ ಹಿಂದಿನ ಇತಿಹಾಸ ತೆರೆದಿಡುತ್ತಾರೆ ಮಿಥಿಕ್‌ ಸೊಸೈಟಿಯಲ್ಲಿ ಬೆಂಗಳೂರು ಶಿಲಾಶಾಸನಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯದ ಗೌರವ ನಿರ್ದೇಶಕ ಉದಯ್‌ ಕುಮಾರ್‌.

ಇಂಗ್ಲೆಂಡ್‌ನಿಂದ ಆಧುನಿಕ ಸಾಮಗ್ರಿಗಳು ಮದ್ರಾಸ್‌ಗೆ ಬಂದ ನಂತರ ಲ್ಯಾಂಪ್ಟನ್‌ ಅಲ್ಲಿಗೆ ತೆರಳಿ ಸಮೀಕ್ಷೆ ಮುಂದುವರಿಸುತ್ತಾನೆ. ಸುಮಾರು 130 ವರ್ಷಗಳ ಕಾಲ ಯೋಜನೆ ಮುಂದುವರಿಯಿತು ಎಂದು ಉದಯ್‌ಕುಮಾರ್ ಮಾಹಿತಿ ನೀಡಿದರು.

‘ಭಾರತದ ವೈಜ್ಞಾನಿಕ ಇತಿಹಾಸದಲ್ಲಿ ಇದು ಅತಿ ಮುಖ್ಯವಾದುದು. ವಿಜ್ಞಾನಿಗಳ ಪಾಲಿಗೆ ಇದು ಮಹತ್ತರ ಅಧ್ಯಯನಶೀಲ ಸ್ಥಳ. ಇಡೀ ಭೂಗೋಳವನ್ನು ವೈಜ್ಞಾನಿಕವಾಗಿ ಅಳತೆ ಮಾಡುವುದಕ್ಕೂ ಇದು ನೆರವಾಯಿತು. ಇಂತಹ ಶ್ರೇಷ್ಠ ಕಾರ್ಯಕ್ಕೆ ಬೆಂಗಳೂರು ಸಾಕ್ಷಿಯಾಗಿರುವುದು ನಮಗೆ ಗರ್ವದ ಸಂಗತಿ’ ಎಂದು ಉದಯ್‌ ತಿಳಿಸಿದರು.

‘ಭಾರತದ ನಕ್ಷೆ ರೂಪಿಸುವಲ್ಲಿ ಈ ಸಮೀಕ್ಷೆ ಮಹತ್ತರ ಪಾತ್ರ ವಹಿಸಿದೆ. ಮೊದಲ ಬಾರಿಗೆ ಇಂಚುಗಳ ಮೂಲಕ ಪ್ರದೇಶದ ಅಳತೆ ದೊರೆಯಿತು. ಆಗ ಮದ್ರಾಸಿನಿಂದ ಬೆಂಗಳೂರಿನವರೆಗೆ ನಡೆಸಿದ ಸಮೀಕ್ಷೆಯಲ್ಲಿ ಲ್ಯಾಂಪ್ಟನ್‌ ಕಂಡುಕೊಂಡ ದೂರಕ್ಕೂ ಈಗಿನ ತಂತ್ರಜ್ಞಾನದಲ್ಲಿ ಮಾಡಿದ ಅಳತೆಗೂ ಕೇವಲ ಆರು ಇಂಚುಗಳ ವ್ಯತ್ಯಾಸವಿದೆ’ ಎಂದು ಅವರು ವಿವರಿಸಿದರು.

ಬಿಬಿಎಂಪಿಯ ಉದ್ಯಾನದಲ್ಲಿ ಇಂತಹ ಒಂದು ಮಹತ್ತರ ಸಮೀಕ್ಷೆಯ ಬಿಂದುವಿನ ಗುರುತಿದೆ ಎಂದು ಮಾಹಿತಿ ನೀಡುವ ಯಾವುದೇ ಫಲಕಗಳನ್ನು ಇಲ್ಲಿ ಅಳವಡಿಸಿಲ್ಲ. ಬಿಂದು ಇರುವ ಕಟ್ಟೆ ಬಳಿಯೂ ಯಾವುದೇ ವಿವರಗಳಿಲ್ಲ.

ಏನಿದು ಟ್ರಿಗೊನೊಮೆಟ್ರಿಕಲ್‌ ಸರ್ವೆ?

ತ್ರಿಕೋನಮಿತಿಯ ಈ ಸಮೀಕ್ಷೆ ಮೂಲಕ ಭೌಗೋಳಿಕ ಪ್ರದೇಶದ ಅಳತೆ ಸಾಧ್ಯವಾಗುತ್ತದೆ. ಲ್ಯಾಂಪ್ಟನ್‌ ಮೇಖ್ರಿ ಮತ್ತು ಕಣ್ಣೂರಿನಲ್ಲಿ ಬಿಂದುವನ್ನು ಗುರುತು ಮಾಡಿ 6–7 ಮೈಲು ಸರಪಳಿಯನ್ನು ಬಿಗಿಯಾಗಿ ಎಳೆದು ಅದರ ತುದಿಯಲ್ಲಿ ಗುರುತು ಹಾಕಿ 20 ಅಡಿಯಂತೆ ಸರಪಳಿಗಳ ಮೂಲಕ ಅಳೆಯುತ್ತಾ ಹೋಗಲಾಗುತ್ತದೆ. ಎರಡೂ ಬಿಂದುಗಳಲ್ಲಿ ತ್ರಿಭುಜಾಕಾರದ ಮಾದರಿ ತಯಾರಿಸಿ ಒಂದು ಬಿಂದುವಿನಿಂದ ಮತ್ತೊಂದಕ್ಕೆ ಇರುವ ದೂರವನ್ನು ಅಳೆಯುತ್ತಾರೆ. ನಂತರ ಎರಡನೇ ಬಿಂದುವಿನಿಂದ ಮೂರನೇ ಬಿಂದುವಿನ ದೂರವನ್ನು ತಿಳಿದು ತ್ರಿಭುಜಾಕಾರದ ಸಮೀಕರಣದ ಮೂಲಕ ಒಂದು ಮತ್ತು ಮೂರನೇ ಬಿಂದುವಿನ ನಡುವಿನ ದೂರ ಲೆಕ್ಕ ಹಾಕುತ್ತಾರೆ ಎಂದು ಉದಯ್‌ ಕುಮಾರ್‌ ವಿವರಿಸಿದರು.

ಅಂಕಿ ಅಂಶ

52 -ಮೊದಲ ಟ್ರಿಗೊನೊಮೆಟ್ರಿಕಲ್‌ ಸರ್ವೆಗೆ ತೆಗೆದುಕೊಂಡ ದಿನಗಳು

130 - ತ್ರಿಕೋನಮಿತಿ ಸಮೀಕ್ಷೆ ಪೂರ್ಣಗೊಳಿಸಲು ಬೇಕಾದ ವರ್ಷ

16 - ದೇಶದಾದ್ಯಂತ ನಿರ್ಮಿಸಲಾದ ಸಮೀಕ್ಷೆ ಬಿಂದುಗಳು

800 - ಸಮೀಕ್ಷಾ ತಂಡದಲ್ಲಿದ್ದ ಸದಸ್ಯರ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.