ADVERTISEMENT

ಪಿಎಸ್‌ಐ ಅಕ್ರಮ: ಎಡಿಜಿಪಿ ಪೌಲ್‌ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 18:24 IST
Last Updated 23 ಜೂನ್ 2022, 18:24 IST

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಪೊಲೀಸ್‌ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮ್ರಿತ್‌ ಪೌಲ್ ಅವರು ಸಿಐಡಿ ತನಿಖಾಧಿಕಾರಿಗಳ‌ ಎದುರು ಎರಡನೇ ಬಾರಿಗೆ ಗುರುವಾರ ಹಾಜರಾದರು.

ನೇಮಕಾತಿ ವಿಭಾಗದಲ್ಲಿ ಅಮ್ರಿತ್ ಪೌಲ್ ಎಡಿಜಿಪಿ ಆಗಿದ್ದಾಗ 545 ಪಿಎಸ್‌ಐ ಹುದ್ದೆಗಳಿಗೆ ಆಯ್ಕೆಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಈ ಹಗರಣದಲ್ಲಿ ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತರಾಜು ಅವರನ್ನು ಸಿಐಡಿ ಬಂಧಿಸಿದೆ. ಶಾಂತಕುಮಾರ್ ಹೇಳಿಕೆಯ ಮೇಲೆ, ಪ್ರಸ್ತುತ ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರುವ ಅಮ್ರಿತ್ ಪೌಲ್ ಈ ಹಿಂದೆ ಕೂಡ ಎರಡು ದಿನ ವಿಚಾರಣೆ ಎದುರಿಸಿದ್ದರು. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಈಗಾಗಲೇ 40 ದಾಟಿದೆ.

ಒಎಂಆರ್‌ ಶೀಟ್‌ ತಿದ್ದಿರುವ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳು ಅಮ್ರಿತ್‌ ಪೌಲ್‌ ವಿರುದ್ಧ ಹೇಳಿಕೆ ನೀಡಿದ್ದರು. ಬಂಧಿತರ ಹೇಳಿಕೆ ಮತ್ತು ಸಾಂದರ್ಭಿಕ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಸಿಐಡಿ ಎಡಿಜಿ ಉಮೇಶ್ ಕುಮಾರ್ ಸಮ್ಮುಖದಲ್ಲಿ ಡಿವೈಎಸ್ಪಿ ಶೇಖರ್ ಅವರು ಪೌಲ್ ಅವರನ್ನು ವಿಚಾರಣೆಗೆ ಒಳಪಡಿಸಿದರು ಎಂದು ಗೊತ್ತಾಗಿದೆ. ಈ ನಡುವೆ, ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಪೌಲ್‌ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.