ಬೆಂಗಳೂರು: ಬನಶಂಕರಿ ಠಾಣೆಯ ಪಿಎಸ್‌ಐ ಸಿ.ಆರ್.ಅರ್ಜುನ್ ಅವರು ಕರ್ತವ್ಯದ ನಡುವೆಯೂ ಕಸರತ್ತು ನಡೆಸಿ ಏಳು ತಿಂಗಳಲ್ಲಿ ದೇಹವನ್ನು ‘ಸಿಕ್ಸ್ ಪ್ಯಾಕ್’ ಮಾಡಿಕೊಂಡಿದ್ದಾರೆ. ಅವರ ಪರಿಶ್ರಮಕ್ಕೆ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ಅವರು ಇತ್ತೀಚೆಗೆ ಜಿಮ್‌ನಲ್ಲಿ ತೆಗೆಸಿಕೊಂಡ ಫೋಟೊಗಳನ್ನು, ಡಿಸಿಪಿ ಅಣ್ಣಾಮಲೈ ಅವರೇ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಗೆ ರವಾನಿಸಿದ್ದಾರೆ. ‘ಕರ್ತವ್ಯ ನಿಭಾಯಿಸುತ್ತಲೇ ಅರ್ಜುನ್ ಫಿಟ್‌ನೆಸ್ ಕಾಪಾಡಿಕೊಳ್ಳುವ ಕಡೆಗೂ ಗಮನ ಕೊಟ್ಟಿದ್ದಾರೆ. ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಸಿಬ್ಬಂದಿಯೂ ಕೆಲವೊಂದು ವ್ಯಾಯಾಮಗಳನ್ನು ಮಾಡಲೇಬೇಕು. ಅರ್ಜುನ್ ಅವರ ಬದ್ಧತೆ ನೋಡಿದರೆ ಖುಷಿ ಆಗುತ್ತದೆ’ ಎಂದಿದ್ದಾರೆ.
‘ದೇಹವನ್ನು ಹಗುರವಾಗಿ ಇಟ್ಟುಕೊಳ್ಳಲು ಮೊದಲಿನಿಂದಲೂ ಕಸರತ್ತು ನಡೆಸುತ್ತಿದ್ದೆ. ಆದರೆ, ನಾಲ್ಕು ವರ್ಷಗಳ ಹಿಂದೆ ಕಾಲಿಗೆ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಕಸರತ್ತು ನಿಲ್ಲಿಸಿದ್ದೆ. ಈಗ ಏಳು ತಿಂಗಳಿನಿಂದ ಮತ್ತೆ ಪ್ರಾರಂಭಿಸಿದೆ’ ಎಂದು ಅರ್ಜುನ್ ಹೇಳಿದರು.
‘ವಸಂತವಲ್ಲಭ ನಗರದಲ್ಲಿರುವ ಫಿಟ್‌ನೆಸ್ ಜಿಮ್‌ನಲ್ಲಿ ಪ್ರತಿದಿನ ಎರಡು ತಾಸು ವರ್ಕೌಟ್ ಮಾಡುತ್ತೇನೆ. ಇಲಾಖೆಯ ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಜಿಮ್‌ಗೆ ಹೋದರೆ, ಹೊರಗೆ ಬರುವುದು 1 ಗಂಟೆಗೆ. ಕೆಲವೊಮ್ಮೆ ಆಯಾಸ ಎನಿಸುತ್ತಿತ್ತಾದರೂ, ಕಸರತ್ತು ನಿಲ್ಲಿಸುವ ಯೋಚನೆ ಮಾಡಲಿಲ್ಲ.’
‘ಅನ್ನ ಹಾಗೂ ಕರಿದ ಆಹಾರ ಪದಾರ್ಥಗಳನ್ನು ಸಂಪೂರ್ಣ ತ್ಯಜಿಸಿ, ತರಬೇತುದಾರರ ಸೂಚನೆಯಂತೆ ಪ್ರೋಟಿನ್, ತರಕಾರಿ, ಹಣ್ಣು–ಹಂಪಲು, ದಿನಕ್ಕೆ 12 ಮೊಟ್ಟೆಗಳು, ಸಮಯಕ್ಕೆ ಸರಿಯಾಗಿ ಮೂರೂ ಹೊತ್ತು ಊಟ ಮಾಡುತ್ತಿದ್ದೆ. 89 ಕೆ.ಜಿ ತೂಕವಿದ್ದ ನಾನು, ಈಗ 69ಕ್ಕೆ ಇಳಿದಿದ್ದೇನೆ. ಸಿಕ್ಸ್ ಪ್ಯಾಕ್ ಕೂಡ ಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.