ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರ ಮಂಜೂರು ಮಾಡಿರುವ ಜಮೀನನ್ನು ರಕ್ಷಿಸುವ ಉದ್ದೇಶದಿಂದ ಜಾರಿಯಾಗಿರುವ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ತಿದ್ದುಪಡಿ ಕಾಯ್ದೆಯ (ಪಿಟಿಸಿಎಲ್) ಗೊಂದಲದಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋರಾಟ ಸಮಿತಿ ಆಗ್ರಹಿಸಿದೆ.
ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಪಿಟಿಸಿಎಲ್ ಕಾಯ್ದೆಯನ್ನು 2023ರಲ್ಲಿ ತಿದ್ದುಪಡಿ ಮಾಡಿದ ನಂತರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಪಿಟಿಸಿಎಲ್ ಕಾಯ್ದೆ ವಿರುದ್ಧವಾಗಿ ಆಗುತ್ತಿರುವ ಆದೇಶಗಳನ್ನು ತಡೆಯಲು ಕಠಿಣ ಕಾನೂನು ರೂಪಿಸಬೇಕು. ಈ ಕಾಯ್ದೆಯ ವಿರುದ್ಧ ಜಿಲ್ಲಾಧಿಕಾರಿಗಳು ಹಾಗೂ ಉಪ ವಿಭಾಗಾಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘2023ರಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಯಲ್ಲಿ ಸೇರಿಸಿರುವ ಕಲಂ 5(1)ಡಿ ಅನ್ನು ತೆಗೆಯಬೇಕು. ಪಿಟಿಸಿಎಲ್ ಕಾಯ್ದೆ ಕಲಂ 3(1)ಬಿ ಅಡಿ ಬರುವ ಜಮೀನುಗಳು ಸರ್ಕಾರದಿಂದ ಮಂಜೂರಾಗಿದ್ದರೂ, ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು ಮಂಜೂರಾತಿ ವಜಾ ಮಾಡಿ, ಗೊಂದಲ ಸೃಷ್ಟಿಸುತ್ತಿದ್ದಾರೆ. ಈ ಎಲ್ಲ ಜಮೀನುಗಳ ಬಗ್ಗೆ ಸ್ಪಷ್ಟಪಡಿಸಿ ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು.
‘ಪಿಟಿಸಿಎಲ್ ತಿದ್ದುಪಡಿ ಕಾಯ್ದೆಯನ್ನು ಸರ್ವನಾಶ ಮಾಡುತ್ತಿರುವ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಕಂದಾಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಸರ್ಕಾರ ಮಂಜೂರಾತಿ ಮಾಡಿದ ಜಮೀನಿನ ದಾಖಲೆಗಳನ್ನು ಸಂರಕ್ಷಿಸಬೇಕು. ಸರ್ಕಾರದ ಪರವಾಗಿ ವಾದ ಮಾಡುವ ವಕೀಲರ ಬೇಜವಾಬ್ದಾರಿಯಿಂದ ಎಲ್ಲ ನ್ಯಾಯಾಲಯಗಳಲ್ಲಿ ಕಾಯ್ದೆಯ ವಿರುದ್ಧ ಆದೇಶಗಳು ಬರುತ್ತಿವೆ. ಇಂತಹ ವಕೀಲರನ್ನು ವಜಾಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯವನ್ನು ರಕ್ಷಿಸಬೇಕಾದ ಸಮಾಜ ಕಲ್ಯಾಣ ಇಲಾಖೆಯೇ ಇದಕ್ಕೆ ನೇರ ಹೊಣೆ ಆಗಿದೆ. ಆದ್ದರಿಂದ ಇಲಾಖೆ ವತಿಯಿಂದ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಈ ಕಾಯ್ದೆಯಡಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಹತ್ತು ದಿನಗಳೊಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.