ADVERTISEMENT

ಶಿಕ್ಷಕ, ಉಪನ್ಯಾಸಕರಿಗೆ ಸರ್ಕಾರದ ಕೊಡುಗೆ

2016ರ ಹೆಚ್ಚುವರಿ ಬಡ್ತಿ ಮೂಲವೇತನದಲ್ಲಿ ವಿಲೀನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 20:19 IST
Last Updated 20 ಅಕ್ಟೋಬರ್ 2018, 20:19 IST

ಬೆಂಗಳೂರು: ಪ್ರೌಢ ಶಾಲಾ ಶಿಕ್ಷಕರು ಮತ್ತು ಪಿ.ಯು. ಉಪನ್ಯಾಸಕರಿಗೆ 2016ರಲ್ಲಿ ನೀಡಲಾಗಿದ್ದ ಹೆಚ್ಚುವರಿ ವೇತನ ಬಡ್ತಿಯನ್ನು ಇದೇ ನವೆಂಬರ್‌ 1ರಿಂದ ಅನ್ವಯವಾಗುವಂತೆ ಮೂಲ ವೇತನದಲ್ಲಿ ವಿಲೀನಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಮಾಡಲು ರಚಿಸಿದ್ದ ಆರನೇ ವೇತನ ಆಯೋಗವು, ಶಿಕ್ಷಕರು, ಮುಖ್ಯ ಶಿಕ್ಷಕರು, ಉಪನ್ಯಾಸಕ ಹಾಗೂ ಪ್ರಾಂಶುಪಾಲರಿಗೆ ನೀಡಲಾಗಿದ್ದ ಹೆಚ್ಚುವರಿ ವೇತನ ಬಡ್ತಿಯನ್ನು ಪರಿಗಣಿಸಿರಲಿಲ್ಲ.

ಈ ಸಮುದಾಯದ ವೇತನ ಪರಿಷ್ಕರಣೆ ಮಾಡುವಾಗ 2017ರ ಜುಲೈ 1ರಂದು ಆಯಾ ಶಿಕ್ಷಕರು, ಉಪನ್ಯಾಸಕರು ಹೊಂದಿದ್ದ ಮೂಲವೇತನವನ್ನು ಆಧಾರವಾಗಿಟ್ಟುಕೊಂಡು ವೇತನ ಹೆಚ್ಚಿಸಲಾಗಿತ್ತು. ಇದರಿಂದಾಗಿ, ಶಿಕ್ಷಕ ಸಮುದಾಯಕ್ಕೆ ಒಂದು ವೇತನ ಬಡ್ತಿಯ ಲಾಭ ಕೈ ತಪ್ಪಿ ಹೋಗಿತ್ತು. ಶನಿವಾರ ಹೊರಡಿಸಿದ ಆದೇಶದಿಂದಾಗಿ ಒಂದು ವೇತನ ಬಡ್ತಿ ಸಿಗಲಿದೆ.

ADVERTISEMENT

ನವೆಂಬರ್ 1ರಂದು ನೌಕರ ಹೊಂದಿರುವ ಮೂಲವೇತನದೊಂದಿಗೆ ಒಂದು ಹೆಚ್ಚುವರಿ ವೇತನ ಬಡ್ತಿಯನ್ನು ವಿಲೀನಗೊಳಿಸಿದ ನಂತರ ಕರ್ನಾಟಕ ನಾಗರಿಕ ಸೇವಾ(ಪರಿಷ್ಕೃತ ವೇತನ) ನಿಯಮಗಳು–2018ರ ಅನ್ವಯಿಸುವ ಪರಿಷ್ಕೃತ ವೇತನ ಶ್ರೇಣಿಯಲ್ಲಿ ವಾರ್ಷಿಕ ವೇತನ ಬಡ್ತಿಯ ವೇತನ ಹಂತವು ಲಭ್ಯವಿಲ್ಲದೇ ಇದ್ದಲ್ಲಿ ಮುಂದಿನ ಹಂತದ ವೇತನವನ್ನು ನಿಗದಿಪಡಿಸತಕ್ಕದ್ದು ಎಂದು ಆದೇಶ ಉಲ್ಲೇಖಿಸಿದೆ.

ಎಕ್ಸ್‌ ಗ್ರೇಷಿಯಾವನ್ನು ಮೂಲವೇತನಕ್ಕೆ ವಿಲೀನಗೊಳಿಸುವುದು, ಕಾಲಮಿತಿ ವೇತನ ಬಡ್ತಿ, ಕಾಲ್ಪನಿಕ ಬಡ್ತಿ ಮತ್ತಿತರ ಬೇಡಿಕೆಗಳನ್ನು ಶಿಕ್ಷಕ ಸಮುದಾಯ ಮಂಡಿಸಿತ್ತು. ಬೇಡಿಕೆ ಈಡೇರಿಸದೇ ಇದ್ದರೆ ಇದೇ 22ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿತ್ತು.

ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದರಿಂದಾಗಿ, ಮುಷ್ಕರವನ್ನು ಕೈಬಿಟ್ಟಿರುವುದಾಗಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.