ADVERTISEMENT

ಸಾರ್ವಜನಿಕ ಸಾರಿಗೆಯಲ್ಲಿ ಶೇ 70ರಷ್ಟು ಜನರ ಪ್ರಯಾಣದ ಗುರಿ: ಪ್ರಿಯಾಂಕ್ ಖರ್ಗೆ

‘ಎನ್‌ರೂಟ್‌’ ಆ್ಯಪ್‌ಗೆ ಚಾಲನೆ ನೀಡಿದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 14:14 IST
Last Updated 10 ಜುಲೈ 2025, 14:14 IST
‘ಎನ್‌ರೂಟ್’ ಆ್ಯಪ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು
‘ಎನ್‌ರೂಟ್’ ಆ್ಯಪ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದರು   

ಬೆಂಗಳೂರು: ಅತ್ಯಧಿಕ ದಟ್ಟಣೆ ಇರುವ ಬೆಂಗಳೂರು ನಗರದಲ್ಲಿ 2030ರ ಹೊತ್ತಿಗೆ ಶೇಕಡ 70ರಷ್ಟು ಜನರು ಸಾರ್ವಜನಿಕ ಸಾರಿಗೆಯಲ್ಲಿಯೇ ಪ್ರಯಾಣಿಸುವಂತೆ ಮಾಡುವ ಗುರಿ ಇದೆ ಎಂದು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. 

ಬಹುಸಾರಿಗೆಗಳ ಮಾಹಿತಿ ಮತ್ತು ಟಿಕೆಟ್‌ ಬುಕ್ಕಿಂಗ್‌ ಒಂದೇ ಕಡೆ ಮಾಡಬಹುದಾದ ‘ಎನ್‌ರೂಟ್‌’ ಆ್ಯಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಶ್ವದಲ್ಲೇ ಅತಿ ವೇಗದಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರು ವಿಪರೀತ ವಾಹನದಟ್ಟಣೆಯ ಸಮಸ್ಯೆ ಎದುರಿಸುತ್ತಿದೆ. ಇದರಿಂದ ಸರಾಗ ಸಂಚಾರಕ್ಕೆ ತೊಡಕಾಗಿದೆ. ಜನರು ತಮ್ಮ ಖಾಸಗಿ ವಾಹನಗಳಿಗಿಂತ ಬಸ್‌, ಮೆಟ್ರೊ, ಆಟೊಗಳಂಥ ಸಾರ್ವಜನಿಕ ಸಾರಿಗೆಯನ್ನು ಬಳಸುವಂತಾದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ವಿವರಿಸಿದರು.

ADVERTISEMENT

ಎಲ್ಲ ಸಾರ್ವಜನಿಕ ಸಂಪರ್ಕಗಳ ಮಾಹಿತಿ ಒಂದೇ ಕಡೆ ಸಿಗುವಂತೆ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಿರುವುದು ಉತ್ತಮ ಬೆಳವಣಿಗೆ. ಸಂಯೋಜಿತ ಡಿಜಿಟಲ್‌ ವ್ಯವಸ್ಥೆ, ಯಾವ ಸಾರಿಗೆ ಎಷ್ಟು ಗಂಟೆಗೆ ಹೊರಡುತ್ತದೆ? ಎಷ್ಟು ಹೊತ್ತಿಗೆ ತಲುಪುತ್ತದೆ ಎಂಬ ಮಾಹಿತಿ ಇದರಲ್ಲಿ ಲಭ್ಯವಾಗುತ್ತಿರುವುದರಿಂದ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದು ಶ್ಲಾಘಿಸಿದರು.

ಐಟಿ, ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕರೂಪ್ ಕೌರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್, ಬಿಎಂಆರ್‌ಸಿಎಲ್‌ ಕಾರ್ಯನಿರ್ವಾಹಕ ನಿರ್ದೇಶಕ (ಕಾರ್ಯಾಚರಣೆ ಮತ್ತು ನಿರ್ವಹಣೆ) ಶಂಕರ್‌ ಎ.ಎಸ್‌.,  ರಾಜ್ಯಸಭೆಯ ಮಾಜಿ ಸದಸ್ಯ ಎಂ.ವಿ. ರಾಜೀವ್ ಗೌಡ, ಮರ್ಸಿಡಿಸ್-ಬೆನ್ಜ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಮನು ಸಾಲೆ, ಡಬ್ಲ್ಯುಆರ್‌ಐ ಕಾರ್ಯನಿರ್ವಾಹಕ ನಿರ್ದೇಶಕ ಪವನ್ ಮುಲುಕುಟ್ಲಾ, ವಿಲ್ಗ್ರೋ ಇನ್ನೋವೇಶನ್ಸ್ ಫೌಂಡೇಷನ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಅನಂತ್ ಅರವಮುದನ್, ಟಮ್ಮೋಕ್‌ನ ಸಿಇಒ ಹಿರಣ್ಮಯ್ ಮಲ್ಲಿಕ್, ನಮ್ಮ ಯಾತ್ರಿ ಸಿಒಒ ಶಾನ್ ಎಂ.ಎಸ್. ಭಾಗವಹಿಸಿದ್ದರು.

ಎನ್‌ರೌಟ್ ಅಪ್ಲಿಕೇಶನ್‌

ಭಾರತದ ಮರ್ಸಿಡಿಸ್‌ ಬೆನ್ಜ್ ಸಂಶೋಧನೆ ಮತ್ತು ಅಭಿವೃದ್ಧಿ (ಎಂಬಿಆರ್‌ಡಿಐ) ಡಬ್ಲ್ಯುಆರ್‌ಐ ಇಂಡಿಯಾ ಮತ್ತು ವಿಲ್ಗ್ರೋ ಸಂಯುಕ್ತ ಆಶ್ರಯದಲ್ಲಿ ‘ಎನ್‌ರೌಟ್: ಚಲನಶೀಲತೆಯ ಒಂದು ಸೇವೆ’ ಎಂಬ ಸ್ಪರ್ಧೆ ನಡೆಸಿತ್ತು. ಟಮ್ಮೋಕ್‌ ಮತ್ತು ನಮ್ಮ ಯಾತ್ರಿ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ ಪ್ರಶಸ್ತಿ ಪಡೆದಿತ್ತು. ಬಿಎಂಟಿಸಿ ಮೆಟ್ರೊ ಅಂಕಿಅಂಶಗಳನ್ನು ಇಟ್ಟುಕೊಂಡು ‘ಎನ್‌ರೌಟ್’ ಆ್ಯಪ್‌ ಅಭಿವೃದ್ಧಿಪಡಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.