ADVERTISEMENT

ಆರನೇ ದಿನಕ್ಕೆ ಕಾಲಿಟ್ಟ ಪಿಯು ಉಪನ್ಯಾಸಕ ಹುದ್ದೆಗೆ ಆಯ್ಕೆಯಾದವರ ಧರಣಿ

ಉಪನ್ಯಾಸಕ ಹುದ್ದೆ: ನೇಮಕಾತಿ ಆದೇಶದ ಪ್ರತಿ ನೀಡಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 4:49 IST
Last Updated 17 ಅಕ್ಟೋಬರ್ 2020, 4:49 IST
ಎಸ್‌.ಸುರೇಶ್‌ ಕುಮಾರ್‌
ಎಸ್‌.ಸುರೇಶ್‌ ಕುಮಾರ್‌   

ಬೆಂಗಳೂರು: ನೇಮಕಾತಿ ಆದೇಶದ ಪ್ರತಿ ನೀಡಬೇಕೆಂದು ಪಟ್ಟುಹಿಡಿದು ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಅಹೋರಾತ್ರಿ ಧರಣಿ ಶುಕ್ರವಾರ 6ನೇ ದಿನಕ್ಕೆ ಕಾಲಿಟ್ಟಿದೆ‌.

ಮಲ್ಲೇಶ್ವರದಲ್ಲಿರುವ ಪದವಿ ಪೂರ್ವ ಶಿಕ್ಷಣ ಮಂಡಳಿಯ ಎದುರು ಒಂದು ವಾರದಿಂದ ನೂರಾರು ಉಪನ್ಯಾಸಕ ಅಭ್ಯರ್ಥಿಗಳು ಮೌನವಾಗಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

ದಾವಣಗೆರೆ, ರಾಯಚೂರು, ಕೊಪ್ಪಳ, ಕಲಬುರ್ಗಿ ಸೇರಿ ರಾಜ್ಯದ ವಿವಿಧೆಡೆಗಳಿಂದ ಬಂದಿರುವ ಉಪನ್ಯಾಸಕ ಅಭ್ಯರ್ಥಿಗಳು ಹೋರಾಟ ಮುಂದುವರೆಸಿದ್ದಾರೆ. ಈ ಪೈಕಿ, ಕೆಲವು ಮಹಿಳಾ ಅಭ್ಯರ್ಥಿಗಳು ಕಂಕುಳಲ್ಲಿ ಮಗು ಎತ್ತಿಕೊಂಡು ಬಂದಿದ್ದಾರೆ.

ADVERTISEMENT

ಪ್ರತಿಭಟನೆ ನಿರತ ಅಭ್ಯರ್ಥಿ ಮಮತಾ ಮಾತನಾಡಿ, ‘ಸರ್ಕಾರ ಕೂಡಲೇ ನೇಮಕಾತಿ ಆದೇಶದ ಪ್ರತಿ ನೀಡಬೇಕು’ ಎಂದು ಒತ್ತಾಯಿಸಿದರು.

ಕೆ.ಟಿ. ಶ್ರೀಕಂಠೇಗೌಡ ಭೇಟಿ: ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ಕೆ.ಟಿ. ಶ್ರೀಕಂಠೇಗೌಡ ಪ್ರತಿಭಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಉಪನ್ಯಾಸಕ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.

‘ನನ್ನಲ್ಲಿ ಭರವಸೆ ಇಡಿ’

‘ನೇಮಕಾತಿ ಆದೇಶ ನೀಡುವ ಕುರಿತು ನನ್ನ ಮೇಲೆ ನೀವು ಭರವಸೆ ಇಡುವುದಾದರೆ ತಕ್ಷಣವೇ ಹೋರಾಟ ಕೈಬಿಡಿ’ ಎಂದು ಧರಣಿ ನಿರತ ಉಪನ್ಯಾಸಕ ಅಭ್ಯರ್ಥಿಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

ಕ್ವಾರಂಟೈನ್‌ನಲ್ಲಿರುವ ಅವರು ಫೇಸ್‌ಬುಕ್‌ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ‘ನೇಮಕಾತಿ ಆದೇಶ ನೀಡಬೇಕೆಂದು ಹಟ ಹಿಡಿದು ಕೂಡುವುದು ಒಳ್ಳೆಯದಲ್ಲ. ಹೋರಾಟ ತಾರ್ಕಿಕವಾಗಿರಬೇಕು. ಎಲ್ಲ ಭರವಸೆಗಳು ದೊರೆತ ನಂತರವೂ ಹಟ ಹಿಡಿಯುವುದು ಹೋರಾಟದ ಅರ್ಥ ಕಳೆದುಕೊಳ್ಳುವ ಹಾಗೆ ಮಾಡುತ್ತದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.