ADVERTISEMENT

‘ಕಲಾಪ’ದಲ್ಲಿ ದೇಶದ ಸಮಸ್ಯೆ ಚರ್ಚಿಸಿದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 19:23 IST
Last Updated 17 ಜನವರಿ 2019, 19:23 IST
ಯುವ ಸಂಸತ್ತು ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರು ಹಸ್ತಲಾಘವ ಮಾಡುವ ಮೂಲಕ ಶುಭಾಶಯ ಹಂಚಿಕೊಂಡರುಪ್ರಜಾವಾಣಿ ಚಿತ್ರ
ಯುವ ಸಂಸತ್ತು ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರು ಹಸ್ತಲಾಘವ ಮಾಡುವ ಮೂಲಕ ಶುಭಾಶಯ ಹಂಚಿಕೊಂಡರುಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದಲ್ಲಿ ಉದ್ದೇಶಪೂರ್ವಕವಾಗಿ ಆದಾಯ ತೆರಿಗೆ ದಾಳಿಗಳು ನಡೆಯುತ್ತಿವೆ. ಈ ಬಗ್ಗೆ ಸರ್ಕಾರದ ಮನದಾಳದಲ್ಲಿ ಏನಿದೆ ಎಂದು ತಿಳಿಯಬಯಸುತ್ತೇನೆ’ ಎಂದು ವಿರೋಧ ಪಕ್ಷದ ಮುಖಂಡ ಪ್ರಶ್ನಿಸಿದಾಗ, ‘ನಿಖರ ಮಾಹಿತಿ ಆಧರಿಸಿ ಐಟಿ ದಾಳಿಗಳು ನಡೆಯುತ್ತವೆ. ಅವುಗಳಲ್ಲಿ ನಮ್ಮ ಹಸ್ತಕ್ಷೇಪವೇ ಇರುವುದಿಲ್ಲ’ ಎಂದು ಆಡಳಿತ ಪಕ್ಷದ ಮಂತ್ರಿಯೊಬ್ಬರು ಖಡಕ್‌ ಉತ್ತರ ನೀಡಿದರು.

‘ಬಾಂಗ್ಲಾದೇಶದಿಂದ ಅಕ್ರಮವಾಗಿ ಜನ ನುಸುಳುತ್ತಿದ್ದಾರೆ. ಈ ಕುರಿತು ಸರ್ಕಾರ ಏನು ಕ್ರಮವಹಿಸಿದೆ’ ಎಂದು ಮತ್ತೊಂದು ಪ್ರಶ್ನೆ ಎದುರಾದಾಗ, ‘ಈ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ. ನುಸುಳುಕೋರರನ್ನು ತಡೆಯಲು ಗಡಿಯಲ್ಲಿ ಭದ್ರತೆ ಹೆಚ್ಚಿಸುತ್ತಿದ್ದೇವೆ. ದೇಶದಲ್ಲಿನ ಅಕ್ರಮ ವಾಸಿಗಳ ವಿರುದ್ಧ ಕ್ರಮ ಜರುಗಿಸುತ್ತಿದ್ದೇವೆ’ ಎಂದು ಸಚಿವೆಯೊಬ್ಬರು ಉತ್ತರಿಸಿದರು.

ಈ ಪ್ರಶ್ನೋತ್ತರ ಕಲಾಪ ನಡೆದದ್ದು ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ನಡೆದ ‘ಯುವ ಸಂಸತ್ತು ಸ್ಪರ್ಧೆ’ಯಲ್ಲಿ. ಈ ಅಣಕು ಕಲಾಪದಲ್ಲಿ ಪಿ.ಯು. ವಿದ್ಯಾರ್ಥಿಗಳು ಜನಪ್ರತಿನಿಧಿಗಳಾಗಿದ್ದರು.

ADVERTISEMENT

ಕಲಾಪಕ್ಕೆ ಸಭಾಪತಿ ಬಂದಾಗ ಎಲ್ಲರೂ ಎದ್ದುನಿಂತು ಗೌರವ ಸೂಚಿಸಿದರು. ಕಲಾಪ ಆರಂಭಿಸುವ ಮುನ್ನ ಅಗಲಿದ ಜಾಫರ್‌ ಷರೀಫ್‌, ಅಂಬರೀಷ್‌ರನ್ನು ಸ್ಮರಿಸಿದರು. ಬಳಿಕ ‘ಯುವ’ ಜನಪ್ರತಿನಿಧಿಗಳು ಪ್ರಶ್ನೋತ್ತರ ಕಲಾಪ ಆರಂಭಿಸಿದರು.

ಪೆಟ್ರೋಲ್‌–ಡೀಸೆಲ್‌ ದರ ಏರಿಕೆ, ನಕ್ಸಲರ ಹಾವಳಿ, ಕಪ್ಪುಹಣ, ಲೋಕಪಾಲ ನೇಮಕ, ಮಹದಾಯಿ ನೀರು ಹಂಚಿಕೆ ಸಮಸ್ಯೆಗಳನ್ನು ಚರ್ಚಿಸಿದರು. ಮಕ್ಕಳು ಹಕ್ಕುಗಳ ವಿಧೇಯಕ ಮಂಡಿಸಿ, ಸರ್ವಾನುಮತದ ಒಪ್ಪಿಗೆ ಪಡೆದರು.

ಸ್ಪರ್ಧೆಯಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳು: ಗೌತಮ ಭಟ್ಟ, ಶ್ರೀದೇವಿ ಪಿ.ಯು.ಕಾಲೇಜು, ಹುಲಿಕಲ್‌, ಕಾರವಾರ; ತಾರಾ ಪ್ರಕಾಶ ತೊಂಡಿಕಟ್ಟಿ, ಸರ್ಕಾರಿ ಪಿ.ಯು.ಕಾಲೇಜು, ವಡೇರಹಟ್ಟಿ, ಚಿಕ್ಕೋಡಿ; ಸಿ.ಪಿ.ಚಿನ್ಮಯಿ, ಸರ್ಕಾರಿ ಪಿ.ಯು.ಕಾಲೇಜು, ಚಿಕ್ಕಮಗಳೂರು; ಗುಣೇಶ್‌ ಭಾರತೀಯ, ಆಳ್ವಾಸ್‌ ಕಾಲೇಜು, ಮೂಡುಬಿದರೆ; ಬಿ.ಶ್ರವಣ್‌ ಉಡುಪ, ಎಸ್‌ಡಿಪಿಟಿ ಕಾಲೇಜು, ಕಟೀಲು, ದಕ್ಷಿಣ ಕನ್ನಡ; ಎಚ್‌.ಎಸ್‌.ವಿವೇಕ, ಜಿ.ಬಿ.ಕಾಲೇಜು, ಹಾಸನ; ಬಿ.ಪಲ್ಲವಿ ಪಟ್ಟಣಶೆಟ್ಟಿ, ಐಸಿಎಸ್‌ ಮಹೇಶ್‌ ಕಾಲೇಜು, ಧಾರವಾಡ; ಮೈಲಾರಿಲಿಂಗ, ಸರ್ಕಾರಿ ಪಿ.ಯು.ಕಾಲೇಜು, ರಾಯಚೂರು; ಎಂ.ಹಷ್ಮಿತ, ಬಿಜಿಎಸ್‌ ಕಾಲೇಜು, ಬೆಂಗಳೂರು ಉತ್ತರ; ಕೆ.ನರಸಿಂಹ, ಬಾಬಾಸಾಹೇಬ ಅಂಬೇಡ್ಕರ್ ಕಾಲೇಜು, ಹರಿಹರ, ದಾವಣಗೆರೆ.

*

ನಮ್ಮ ಓಣಿಯಲ್ಲಿ ಬೀದಿದೀಪ ಇರಲಿಲ್ಲ. ಅದನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರ ಗಮನಕ್ಕೆ ತಂದು, ಹಲವು ಬಾರಿ ಒತ್ತಾಯಿಸಿದೆ. ಈಗ ಓಣಿಗೆ ಬೆಳಕು ಬಂದಿದೆ. ರಾಜಕೀಯ ಸೇರುವ ಆಸಕ್ತಿನನ್ನಲ್ಲಿ ಹುಟ್ಟಿದೆ.

ಮೈಲಾರಿಲಿಂಗ, ರಾಯಚೂರು

*

ಸ್ಪರ್ಧೆಯಿಂದ ಕಲಾಪದ ತಯಾರಿಗಳು ತಿಳಿದವು. ಮತದಾನದ ಮಹತ್ವ ಗೊತ್ತಾಯಿತು. ಸಿದ್ಧಾಂತ ಆಧರಿಸಿ ಪಕ್ಷವನ್ನು ಬೆಂಬಲಿಸಬೇಕೆಂಬ ಅರಿವು ಬಂತು.

ಬಿ.ಶ್ರವಣ್‌ ಉಡುಪ, ದಕ್ಷಿಣ ಕನ್ನಡ

*

ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ ಅಯೋಗ್ಯರು ತುಂಬಿದ್ದಾರೆ. ಉನ್ನತ ಅಧಿಕಾರದ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಇದನ್ನು ಹೀಗೆ ಬಿಟ್ಟರೆ, ನಮ್ಮ ದೇಶ ಮತ್ತೆ ಪರಕೀಯರ ದಾಸ್ಯಕ್ಕೆ ಒಳಗಾಗಲಿದೆ. ಅದನ್ನು ತಡೆಯಲು ಯುವ ಜನತೆಯಲ್ಲಿ ಜಾಗೃತಿ ಮೂಡಬೇಕು. ನಾನು ರಾಜಕೀಯ ಸೇರಬೇಕು ಅಂದುಕೊಂಡಿದ್ದೇನೆ.

ಎಚ್‌.ಎಸ್‌.ವಿವೇಕ, ಹಾಸನ

*

ಈಗಿನ ಜನನಾಯಕರು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಪ್ರಜೆಗಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಹೆಚ್ಚಿಸಬೇಕು.

ಕೆ.ನರಸಿಂಹ, ದಾವಣಗೆರೆ

*

ಈ ಸ್ಪರ್ಧೆಗೆಂದು ವಿಶೇಷ ತಯಾರಿಯೇನು ಮಾಡಿರಲಿಲ್ಲ. ರಾಜ್ಯಸಭಾ, ಲೋಕಸಭಾ ವಾಹಿನಿಗಳಲ್ಲಿ ಕಲಾಪಗಳನ್ನು ನೋಡುತ್ತಿದ್ದೆ. ಅದರಿಂದ ಸ್ಪರ್ಧೆಗೆ ಸಿದ್ಧವಾಗಲು ಸಹಾಯವಾಯಿತು. ಈ ಸ್ಪರ್ಧೆಯಿಂದ ಒಂದಿಷ್ಟು ನಾಯಕತ್ವ ಗುಣ ಬೆಳೆಯಿತು. ಸಂದರ್ಭಕ್ಕೆ ತಕ್ಕ ನಿರ್ಧಾರ ತಳೆಯುವ ಮನೋಭಾವ ಬಂತು. ಈಗಿನ ರಾಜಕೀಯ ಸರಿಯಿಲ್ಲ. ಸುಧಾರಣೆ ಆಗಬೇಕಿದೆ.

ತಾರಾ ಪ್ರಕಾಶ ತೊಂಡಿಕಟ್ಟಿ, ಚಿಕ್ಕೋಡಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.