ಬೆಂಗಳೂರು: ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪು ವೃತ್ತದ ಕೆಳ ಸೇತುವೆಯಲ್ಲಿ ಅಪಾರ ಪ್ರಮಾಣದ ಮೊಳೆಗಳು ಬಿದ್ದಿದ್ದು, ನಗರದಲ್ಲಿ ಮತ್ತೆ ‘ಪಂಕ್ಚರ್ ಮಾಫಿಯಾ’ ಸಕ್ರಿಯ ಆಗಿರುವ ಅನುಮಾನ ವ್ಯಕ್ತವಾಗಿದೆ.
ರಾತ್ರಿ ವೇಳೆ ಮೊಳೆ ಎಸೆದು ಕಿಡಿಗೇಡಿಗಳು ಪರಾರಿ ಆಗಿರುವ ಶಂಕೆ ಇದೆ. ಮೊಳೆಗಳು ರಸ್ತೆ ಮೇಲೆ ಬಿದ್ದಿರುವುದರ ಹಿಂದೆ ಸುತ್ತಮುತ್ತಲಿನ ಪಂಕ್ಚರ್ ಅಂಗಡಿಗಳ ಕೈವಾಡವಿರುವ ಅನುಮಾನ ವ್ಯಕ್ತವಾಗುತ್ತಿದೆ.
‘ರಸ್ತೆಯ ಮೇಲೆ ಮೊಳೆ ಎಸೆದು ವಾಹನ ಚಕ್ರಗಳು ಪಂಕ್ಚರ್ ಆಗುವಂತೆ ಮಾಡುತ್ತಿದ್ಧಾರೆ’ ಎಂದು ವಾಹನ ಸವಾರರು ದೂರಿದ್ಧಾರೆ.
ಕಿಡಿಗೇಡಿಗಳ ಪತ್ತೆಗೆ ಅಕ್ಕಪಕ್ಕದ ಸಿಸಿ ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಜಾಲಹಳ್ಳಿ ಸಂಚಾರ ಠಾಣೆ ಸಿಬ್ಬಂದಿಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಮೊಳೆ ಹೆಕ್ಕಿ ತೆಗೆಯುತ್ತಿರುವ ವಿಡಿಯೊ ಹಾಗೂ ಫೋಟೊಗಳನ್ನು ಪೊಲೀಸ್ ಇಲಾಖೆ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಪ್ರಕಟಿಸಿದೆ. ಸಿಬ್ಬಂದಿ ಕಾರ್ಯಕ್ಕೆ ವಾಹನ ಸವಾರರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಚಾರ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಕೆಲವು ರಸ್ತೆಗಳು ಇತ್ತೀಚೆಗೆ ‘ಪಂಕ್ಚರ್ ರಸ್ತೆ’ಗಳಾಗಿ ಮಾರ್ಪಡುತ್ತಿವೆ. ಹೊರವರ್ತುಲ ರಸ್ತೆ, ಮೇಲ್ಸೇತುವೆ ರಸ್ತೆಗಳು ಹಾಗೂ ಒಳ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಮೊಳೆಗಳನ್ನು ಎಸೆಯಲಾಗುತ್ತಿದೆ. ಇಂತಹ ರಸ್ತೆಗಳಲ್ಲಿ ಓಡಾಡುವ ವಾಹನಗಳ ಚಕ್ರಗಳು, ಮೊಳೆಗೆ ಸಿಲುಕಿ ಪಂಕ್ಚರ್ ಆಗುತ್ತಿವೆ. ಈ ಹಿಂದೆ ನಾಗಾವರ, ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಒಳ ರಸ್ತೆಗಳಲ್ಲಿ ಈ ರೀತಿ ಮೊಳೆ ಎಸೆದು ವಾಹನಗಳ ಚಕ್ರಗಳು ಪಂಕ್ಚರ್ ಆಗುವಂತೆ ಕಿಡಿಗೇಡಿಗಳು ಮಾಡುತ್ತಿದ್ದರು. ಈಗ ಮತ್ತೆ ಅದೇ ರೀತಿಯ ಮಾಫಿಯಾ ಸಕ್ರಿಯವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.