ADVERTISEMENT

ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹರಿದಿದ್ದ ಪುನೀತ್ ಕೆರೆಹಳ್ಳಿ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 16:44 IST
Last Updated 14 ಆಗಸ್ಟ್ 2022, 16:44 IST
ಪುನೀತ್ ಕೆರೆಹಳ್ಳಿ
ಪುನೀತ್ ಕೆರೆಹಳ್ಳಿ   

ಬೆಂಗಳೂರು: ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ಅಂಗವಾಗಿ ಅಳವಡಿಸಿದ್ದ ಟಿಪ್ಪು ಸುಲ್ತಾನ್‌ ಭಾವಚಿತ್ರವಿದ್ದ ಫ್ಲೆಕ್ಸ್‌ ಹರಿದಿದ್ದ ಆರೋಪದಡಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆ ಅಧ್ಯಕ್ಷ ಪುನೀತ್ ಕೆರೆಹಳ್ಳಿ ಸೇರಿದಂತೆ ಮೂವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೆ.ಆರ್. ವೃತ್ತ, ನೃಪತುಂಗ ರಸ್ತೆ, ಹಡ್ಸನ್‌ ವೃತ್ತದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಹಾಗೂ ತ್ರಿವರ್ಣ ಧ್ವಜದ ಸಮೇತ ಕಾರ್ಯಕ್ರಮದ ಫ್ಲೆಕ್ಸ್ ಅಳವಡಿಸಲಾಗಿತ್ತು. ಶನಿವಾರ ರಾತ್ರಿ ಸ್ಥಳಕ್ಕೆ ಹೋಗಿದ್ದ ಪುನೀತ್ ಕೆರೆಹಳ್ಳಿ ಹಾಗೂ ಬೆಂಬಲಿಗರು, ಫ್ಲೆಕ್ಸ್ ಹರಿದು ಹಾಕಿದ್ದರು. ‘ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರನಲ್ಲ’ ಎಂಬುದಾಗಿ ಘೋಷಣೆ ಕೂಗಿದ್ದರು. ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಕೃತ್ಯದ ವಿರುದ್ಧ ಕಾಂಗ್ರೆಸ್ ಪಕ್ಷದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಬಿ. ಮಂಜುನಾಥ್ ಭಾನುವಾರ ದೂರು ನೀಡಿದ್ದಾರೆ. ಅಕ್ರಮ ಕೂಟ (ಐಪಿಸಿ 143), ಅಕ್ರಮವಾಗಿ ಗುಂಪು ಸೇರುವುದು (ಐಪಿಸಿ 149), ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಎಸಗಿದ ಉದ್ದೇಶಪೂರ್ವಕ ಕೃತ್ಯ (ಐಪಿಸಿ 295 ಎ) ಆರೋಪ ಹಾಗೂ ರಾಷ್ಟ್ರೀಯ ಅಗೌರವ ಪ್ರತಿಬಂಧಕ ಕಾಯ್ದೆ 1971ರಡಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದೂ ತಿಳಿಸಿವೆ.

ADVERTISEMENT

ಸಂಬಂಧಿಕರ ಮನೆಯಲ್ಲಿ ವಶಕ್ಕೆ: ‘ಆರೋಪಿ ಪುನೀತ್, ಸಂಬಂಧಿಕರ ಮನೆಯಲ್ಲಿ ಭಾನುವಾರ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸ್ಥಳಕ್ಕೆ ಹೋಗಿ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತರಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಬೆಂಬಲಿಗರಾದ ಅನಂತರಾಮ್ ಹಾಗೂ ಕಿರಣ್‌ ಎಂಬುವವರನ್ನೂ ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತಷ್ಟು ಮಂದಿ ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿವೆ.

ಕಾಂಗ್ರೆಸ್ ಪ್ರತಿಭಟನೆ: ಟಿಪ್ಪು ಸುಲ್ತಾನ್ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಹಲಸೂರು ಗೇಟ್ ಠಾಣೆ ಎದುರು ಭಾನುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು. ‘ಆರೋಪಿಗಳನ್ನು ಬಂಧಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು, ದೂರು ಪಡೆದು ಆರೋಪಿಗಳನ್ನು ಬಂಧಿಸಿದ ಬಳಿಕವೇ ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.