ADVERTISEMENT

ಬೆಂಗಳೂರು: ಐಐಎಸ್‌ಸಿಯಲ್ಲಿ ‘ಕ್ವಾಂಟಮ್ ಪಾರ್ಕ್‌’ಗೆ ಸಂಪುಟ ಒಪ್ಪಿಗೆ

ಬೂಟ್ ಆಧಾರದಲ್ಲಿ ಸುರಂಗ ರಸ್ತೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 23:30 IST
Last Updated 5 ಜೂನ್ 2025, 23:30 IST
ಎಚ್‌.ಕೆ.ಪಾಟೀಲ
ಎಚ್‌.ಕೆ.ಪಾಟೀಲ   

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದೊಂದಿಗೆ ‘ಕ್ವಾಂಟಮ್‌ ಸಂಶೋಧನಾ ಪಾರ್ಕ್‌’ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಈ ವಿಷಯ ತಿಳಿಸಿದರು.

‘ಕ್ವಾಂಟಮ್‌ ತಂತ್ರಜ್ಞಾನದ ಕ್ರಾಂತಿಯನ್ನು ಮುನ್ನಡೆಸುವ ನಿಟ್ಟಿನಲ್ಲಿ ಕರ್ನಾಟಕದ ಈ ಪ್ರಯತ್ನ ಪ್ರಮುಖ ಹೆಜ್ಜೆಯಾಗಿದೆ. ₹48 ಕೋಟಿ ಅನುದಾನದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಈ ಪಾರ್ಕ್‌ ಸ್ಥಾಪನೆ ಆಗಲಿದೆ. ಜಾಗತಿಕ ಮಟ್ಟದ ಪ್ರಯೋಗಾಲಯಗಳು ಮತ್ತು ಸಂಶೋಧನಾ ಉಪಕರಣಗಳನ್ನು ಹೊಂದಿರಲಿವೆ’ ಎಂದು ಅವರು ಹೇಳಿದರು.

ADVERTISEMENT

‘ಕ್ವಾಂಟಮ್‌ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಸಾಮರ್ಥ್ಯ ಹಾಗೂ ಅವಕಾಶಗಳನ್ನು ವೃದ್ಧಿಸಲು ಈ ಪಾರ್ಕ್‌ ನೆರವಾಗಲಿದೆ. ವಿದ್ಯಾರ್ಥಿಗಳು, ಸಂಶೋಧಕರು, ನವೋದ್ಯಮಗಳು ಈ ಪಾರ್ಕ್‌ನ ಸವಲತ್ತುಗಳನ್ನು ಬಳಸಿಕೊಳ್ಳಲು ಅವಕಾಶ ಒದಗಿಸಲಾಗುತ್ತದೆ’ ಎಂದರು.

ಬೂಟ್ ಆಧಾರದಲ್ಲಿ ಸುರಂಗ ರಸ್ತೆ: ಹೆಬ್ಬಾಳ ಜಂಕ್ಷನ್‌ನಿಂದ ಎಚ್‌ಎಸ್‌ಆರ್‌ ಲೇಔಟ್‌ನ ಸಿಲ್ಕ್‌ಬೋರ್ಡ್‌ವರೆಗೆ ಉತ್ತರ–ದಕ್ಷಿಣ ಕಾರಿಡಾರ್‌ (ಸುರಂಗ ರಸ್ತೆ) ಅನ್ನು ಬೂಟ್‌ (ಬಿಲ್ಡ್ ಓನ್ ಆಪರೇಟ್‌–ಬಿಒಟಿ) ಆಧಾರದಲ್ಲಿ ನಿರ್ಮಿಸಲಾಗುವುದು. ಇದಕ್ಕಾಗಿ ಸದ್ಯವೇ ಜಾಗತಿಕ ಟೆಂಡರ್‌ ಕರೆಯಲಾಗುವುದು ಎಂದು ಎಚ್‌.ಕೆ.ಪಾಟೀಲ ತಿಳಿಸಿದರು.

ಅವಳಿ ಭೂಗತ ಸುರಂಗ ರಸ್ತೆಯ ಉದ್ದ 33.49 ಕಿ.ಮೀ. ಅನ್ನು 26 ತಿಂಗಳಲ್ಲಿ ಕೊರೆಯಲಾಗುತ್ತದೆ ಹಾಗೂ ನಂತರದ 12 ತಿಂಗಳಲ್ಲಿ ನಿರ್ಮಾಣ ಕಾಮಗಾರಿ ನಡೆಯಲಿದೆ. ಇದು ಟೋಲ್‌ ರಸ್ತೆ ಆಗಿರುತ್ತದೆ ಎಂದರು.

ಮರು ಟೆಂಡರ್‌: ಬಿಬಿಎಂಪಿಯ ವ್ಯಾಪ್ತಿಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಟೆಂಡರ್‌ ಕರೆದ ಸಂದರ್ಭದಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸದ ಕಾರಣ, ನಾಲ್ಕರ ಬದಲಿಗೆ ಎರಡು ಪ್ಯಾಕೇಜ್‌ಗಳಲ್ಲಿ ಮರು ಟೆಂಡರ್‌ ಕರೆಯಲು ಸಚಿವ ಸಂಪುಟ ನಿರ್ಣಯಿಸಿದೆ ಎಂದರು.

ಶೇ 5 ಬಡ್ಡಿ ಸಹಾಯ ಧನ: ನಗರದ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ಸಾಲ ಪಡೆದು ಮನೆ ಖರೀದಿಸುವ ಫಲಾನುಭವಿಗಳಿಗೆ ಶೇ 5 ರಷ್ಟು ಬಡ್ಡಿ ಸಹಾಯಧನ ನೀಡಲಾಗುವುದು ಎಂದರು.

‘ಬಡ್ಡಿ ಸಹಾಯಧನ ಯೋಜನೆ’ಯಡಿ ಫಲಾನುಭವಿಗಳ ಸಾಲದ ಮಾಸಿಕ ಕಂತಿನ ಬಡ್ಡಿ ಭಾಗದಲ್ಲಿ ₹3000 ಮಿತಿಗೆ ಒಳಪಟ್ಟು ಸರ್ಕಾರದಿಂದ ಶೇ 3 ರಿಂದ ಶೇ 5 ರ ಸಹಾಯಧನ ನೀಡಲಾಗುವುದು. ಸಹಾಯಧನವನ್ನು ಸರ್ಕಾರವೇ ಭರಿಸಲಿದೆ. ಈ ಸೌಲಭ್ಯವನ್ನು ಫಲಾನುಭವಿಯ ಸಾಲದ ಅವಧಿಯ 10 ವರ್ಷಗಳ ಅವಧಿಗೆ ಮಾತ್ರ ನೀಡಲಾಗುವುದು’ ಎಂದು ಅವರು ಹೇಳಿದರು.

ಚರ್ಚೆಗೆ ಬಾರದ ಸಮೀಕ್ಷೆ ದತ್ತಾಂಶ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದತ್ತಾಂಶಗಳ ಅಧ್ಯಯನ ವರದಿಯ ವಿಷಯ ಚರ್ಚೆಗೆ ಬರಲಿಲ್ಲ ಎಂದು ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.