ADVERTISEMENT

ಬೆಂಗಳೂರಿನಲ್ಲಿ ಜುಲೈ 31 ರಿಂದ ಕ್ವಾಂಟಮ್ ಇಂಡಿಯಾ ಸಮಾವೇಶ

quantum science

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 16:30 IST
Last Updated 8 ಜುಲೈ 2025, 16:30 IST
   

ಬೆಂಗಳೂರು: ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ಪೂರಕ ಸೌಕರ್ಯಗಳನ್ನು ಹೊಂದಿರುವ ಕಾರಣದಿಂದ ಬೆಂಗಳೂರು ನಗರದಲ್ಲಿ ಜುಲೈ 31 ಹಾಗೂ ಆಗಸ್ಟ್‌ 1ರಂದು ‘ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನ’ ಆಯೋಜಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್.ಬೋಸರಾಜು ತಿಳಿಸಿದರು.

ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದಲ್ಲೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಸಮಾವೇಶದ ಮೊದಲ ದಿನ ಕ್ವಾಂಟಮ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಡಂಕನ್ ಹಲ್ದಾನೆ ಹಾಗೂ ಪ್ರೊ. ಡೇವಿಡ್ ಗ್ರಾಸ್ ಪ್ರಧಾನ ಭಾಷಣ ಮಾಡಲಿದ್ದಾರೆ. ಸಮಾವೇಶದಲ್ಲಿ ಕ್ವಾಂಟಮ್ ಇನ್ ಕಂಪ್ಯೂಟಿಂಗ್, ಫೈನಾನ್ಸ್ ಮತ್ತು ಎಐ - ಕ್ವಾಂಟಮ್ ಇನ್ ಹೆಲ್ತ್ ಕೇರ್, ಕ್ವಾಂಟಮ್ ಇನ್ ಪೆರಿಫೆರಿಲ್ಸ್ ಆ್ಯಂಡ್‌ ಹಾರ್ಡ್‌ವೇರ್‌, ಕ್ವಾಂಟಮ್ ಇನ್ ಸೊಸೈಟಿ ಆ್ಯಂಡ್‌ ಆರ್ಟ್, ಕ್ವಾಂಟಮ್ ಇನ್ ಸೆಕ್ಯೂರಿಟಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ತಜ್ಞರಿಂದ ಮಾಹಿತಿಯ ವಿನಿಮಯವಾಗಲಿದೆ’ ಎಂದು ಹೇಳಿದರು.

‘ಕ್ವಾಂಟಮ್ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಮುಂಚೂಣಿ ರಾಜ್ಯವನ್ನಾಗಿ ರೂಪಿಸುವಲ್ಲಿ ಸರ್ಕಾರ ಬದ್ಧವಾಗಿದೆ. ರಾಜ್ಯವನ್ನು ವಿಶ್ವದ ಕ್ವಾಂಟಮ್ ಕ್ಷೇತ್ರದ ಪ್ರಮುಖ ಹಬ್ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ‘ಕರ್ನಾಟಕ ಕ್ವಾಂಟಮ್ ಕ್ರಿಯಾ ಯೋಜನೆ’ ಸಿದ್ಧಪಡಿಸಲಾಗುತ್ತಿದೆ. ಈ ಸಂಬಂಧ ಕ್ವಾಂಟಮ್ ಕ್ಷೇತ್ರದ ಸಾಧಕರನ್ನೊಳಗೊಂಡ ಕಾರ್ಯಪಡೆ ರಚಿಸಲಾಗುವುದು’ ಎಂದು ವಿವರಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್ ಕೌರ್, ಕೆಸ್ಟೆಪ್ಸ್ ನಿರ್ದೇಶಕ ಸದಾಶಿವ ಪ್ರಭು, ಸಮ್ಮೇಳನದ ಸಂಚಾಲಕ ಪ್ರೊ.ಅರಿಂದಮ್ ಘೋಷ್, ಸಹ ಸಂಚಾಲಕ ಪ್ರೊ.ಅಕ್ಷಯ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.