ಏಷ್ಯನ್ ಅಭಿವೃದ್ಧಿ ಬ್ಯಾಂಕ್
ಬೆಂಗಳೂರು: ‘ದೊಡ್ಡಬಳ್ಳಾಪುರ- ಡಾಬಸ್ ಪೇಟೆ ನಡುವೆ ನಿರ್ಮಾಣವಾಗಲಿರುವ ‘ಕ್ವಿನ್ ಸಿಟಿ’ಯಲ್ಲಿ ಅವಕಾಶಗಳ ಬಗ್ಗೆ ಪರಿಶೋಧಿಸಲಾಗುವುದು. ರಾಜ್ಯ ಸರ್ಕಾರದ ಜೊತೆ ನಿಕಟ ಸಂಪರ್ಕದಲ್ಲಿದ್ದು ಸಹಭಾಗಿತ್ವದ ಅವಕಾಶಗಳ ಬಗ್ಗೆಯೂ ಸಮಾಲೋಚನೆ ನಡೆಸಲಾಗುವುದು’ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕಿನ (ಎಡಿಬಿ) ಉನ್ನತ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಎಡಿಬಿ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಫೂಕ್ ಯೆನ್ ಚಾಂಗ್ ನೇತೃತ್ವದ ಒಂಬತ್ತು ಜನರ ತಂಡಕ್ಕೆ ‘ಕ್ವಿನ್ ಸಿಟಿ‘ ಯೋಜನೆ ಬಗ್ಗೆ ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ್, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಹಾಗೂ ಕೈಗಾರಿಕಾ ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ ಅವರ ನೇತೃತ್ವದಲ್ಲಿ ಗುರುವಾರ ಪ್ರ್ಯಾತ್ಯಕ್ಷಿಕೆ ನೀಡಲಾಯಿತು.
‘ಕ್ವಿನ್ ಸಿಟಿ’ಗೆ ಎಂತಹ ಸಂಸ್ಥೆಗಳು ಬರಲಿವೆ. ಉದ್ದೇಶಿತ ಸಂಪರ್ಕ ವ್ಯವಸ್ಥೆ, ಮೂಲಸೌಕರ್ಯ ಮತ್ತಿತರ ಅಂಶಗಳ ಬಗ್ಗೆ ಎಡಿಬಿ ನಿಯೋಗದ ಸದಸ್ಯರು ವಿವರ ಪಡೆದರು. ಶಾಲಾ ಶಿಕ್ಷಣ, ಕೌಶಲಾಭಿವೃದ್ಧಿ ಹಾಗೂ ಉನ್ನತ ಶಿಕ್ಷಣದ ವಲಯಗಳಿಗೆ ಸಂಬಂಧಿಸಿದ ಹಲವು ಉಪಕ್ರಮಗಳಲ್ಲಿ ಭಾಗಿಯಾಗುವ ಬಗ್ಗೆಯೂ ಆಸಕ್ತಿ ಹೊಂದಿರುವುದಾಗಿ ತಿಳಿಸಿದರು.
‘ಕ್ವಿನ್ ಸಿಟಿ’ಯಲ್ಲಿ ದೇಶ ವಿದೇಶಗಳ ಮುಂಚೂಣಿ ಶಿಕ್ಷಣ ಸಂಸ್ಥೆಗಳಿಗೆ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. ‘ಕ್ವಿನ್ ಸಿಟಿ’ಯನ್ನು ಜ್ಞಾನ-ಆರೋಗ್ಯ-ನಾವೀನ್ಯಾತಾ ವಲಯವನ್ನಾಗಿಸುವುದು ಸರ್ಕಾರದ ಉದ್ದೇಶವಾಗಿದೆ. ಇಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಮುಂದಾಗುವ ಶಿಕ್ಷಣ ಸಂಸ್ಥೆಗಳು ಬ್ಯಾಂಕಿನಿಂದ ಸಾಲ ನೆರವು ಕೋರುವ ಸಾಧ್ಯತೆ ಇರುತ್ತದೆ. ಹೀಗಾಗಿ, ಎಡಿಬಿ ಉನ್ನತಾಧಿಕಾರಿಗಳಿಗೆ ಯೋಜನೆ ಕುರಿತು ವಿವರ ಮಾಹಿತಿ ಇದ್ದರೆ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಮಾಹಿತಿ ಪ್ರಸ್ತುತಪಡಿಸಲಾಯಿತು.
ಎಡಿಬಿಯ ಶಿಕ್ಷಣ ವಿಭಾಗದ ತಜ್ಞರಾದ ಕೆ.ಡಬ್ಲ್ಯು.ಸ್ಯಾಮ್ಯುಯೆಲ್, ನಹ್ಯುನ್ ಕಿಮ್, ಶಾನ್ ಎಂ.ವೆಲ್ ಬೌರ್ನ್, ಲೀಹ್ ಮೆಕ್ ಮ್ಯಾನಸ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.